ರಾಹುಲ್ ಗಾಂಧಿಯವರು ಕಳೆದ ವಾರ ಬೆಂಗಳೂರಿಗೆ ಬಂದು ಚುನಾವಣಾ ಆಯೋಗದ ಮೇಲೆ ಆರೋಪದ ಮೇಲೆ ಆರೋಪ ಮಾಡಿದ್ದರು. ಬಿಜೆಪಿ ಕೇಂದ್ರದಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂಬಂತೆ ದೇಶದ ಜನರ ಮುಂದೆ ಬಿಂಬಿಸಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಪಲಾಯನ ಮಾಡಿದ್ದಾರೆ. ಮತ್ತೊಂದು ಕಡೆ ರಾಜಣ್ಣನವರು ಸತ್ಯವನ್ನು ಬಹಿರಂಗ ಪಡಿಸಿದಾಗ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಖಂಡಿತ ಸರಿಯಲ್ಲ ಎಂದು ವಿಶ್ಲೇಷಿಸಿದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ಷಡ್ಯಂತ್ರ, ಪಿತೂರಿ ಕುರಿತು ಸಂದರ್ಭ ಬಂದಾಗ ತಿಳಿಸುವುದಾಗಿ ರಾಜಣ್ಣ ತಿಳಿಸಿದ್ದಾರೆ. ಅವರ ಹೇಳಿಕೆ ಗಮನಿಸಿದ್ದೇನೆ. ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶಾದ್ಯಂತ ತಿರುಗುವ ರಾಹುಲ್ ಗಾಂಧಿಯವರಿಗೆ ಸತ್ಯವನ್ನು ಅರಗಿಸಿಕೊಳ್ಳುವ, ಸತ್ಯವನ್ನು ಕೇಳಿಸಿಕೊಳ್ಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ಒಬ್ಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಚಿವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುವ ರೀತಿ ಇದುವೇ? ಯಾವ ಬಾಬಾ ಸಾಹೇಬ ಅಂಬೇಡ್ಕರರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ ಪಕ್ಷದವರು, ರಾಜಣ್ಣನವರ ಬಗ್ಗೆ ನಡೆದುಕೊಂಡಿರುವುದು ಸರಿಯೇ ಎಂದು ರಾಜ್ಯಾದ್ಯಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ನುಡಿದರು.
ಎಸ್.ಐ.ಟಿ ಹಾದಿ ತಪ್ಪುತ್ತಿದೆಯೇ?
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ನಿನ್ನೆ ಕೂಡ ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ ಆಗಿದೆ. ಎಸ್.ಐ.ಟಿ ಎಲ್ಲೋ ಒಂದು ಕಡೆ ಹಾದಿ ತಪ್ಪುತ್ತಿದೆಯೇ? ಎಂದು ಕೇಳಿದರು. ಎಸ್.ಡಿ.ಪಿ.ಐ, ಕಮ್ಯುನಿಸ್ಟ್ ಮತ್ತಿತರ ಬೇರೆ ಬೇರೆ ಸಂಘಟನೆಗಳು ಇದರ ಹಿಂದೆ ನಿಂತಿದ್ದಾರೆ. ಇವೆಲ್ಲವೂ ಗುಮಾನಿಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಶ್ರೀ ಮಂಜುನಾಥೇಶ್ವರನ ಭಕ್ತಾದಿಗಳ ಮನಸ್ಸಿಗೆ ಘಾಸಿ ಆಗುವಂಥ ಚಟುವಟಿಕೆಗಳು ನಡೆಯುತ್ತಿದ್ದು, ಇದು ಸರಿಯಲ್ಲ; ಈ ವಿಷಯವನ್ನೂ ಸದನದಲ್ಲಿ ಚರ್ಚಿಸಿ ಸರಕಾರದ ಉತ್ತರ ಬಯಸುತ್ತೇವೆ ಎಂದು ತಿಳಿಸಿದರು.