ಬೆಂಗಳೂರು: ಬಹುಕೋಟಿ ನಕಲಿ ಛಾಪಾಕಾಗದ ಹಗರಣದ ಕಿಂಗ್‌ಪಿನ್ ಅಬ್ದುಲ್ ಕರೀಂ ಲಾಲ್ ತೆಲಗಿ(56) ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
30 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತೆಲಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ತೆಲಗಿ ಹೃದ್ರೋಗ ಹಾಗೂ ಮಧುಮೇಹ ಸಮಸ್ಯೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾನೆ. ಈತನಿಗೆ ಚಿಕಿತ್ಸೆ ನೀಡಲು ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ 3 ದಿನದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತೆಲಗಿ ನಿನ್ನೆ ರಾತ್ರಿ 8.30ಕ್ಕೆ ಮೃತಪಟ್ಟಿದ್ದಾನೆ ಎಂದು ಕೆಲ ಸಾಮಾಜಿಕ ಜಾಲತಾಣಗಳು ವರದಿ ಮಾಡಿವೆ. ಆದರೆ ಈ ಕುರಿತು ಹೇಳಿಕೆ ನೀಡಿರುವ ಆಸ್ಪತ್ರೆ ವೈದ್ಯರು ತೆಲಗಿ ಮೃತಪಟ್ಟಿಲ್ಲ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಇನ್ನು ತೆಲಗಿ ಪರ ವಕೀಲ ಎಂ.ಟಿ.ನಾಣಯ್ಯ, ತೆಲಗಿ ಬದುಕಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಐಸಿಯು ನಲ್ಲಿ ವೆಂಟಿಲೇಟರ್ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.