ಕಂದಾಯ ಇಲಾಖೆಯ ವತಿಯಿಂದ ತರೀಕೆರೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಡಾ. ರಾಜ್ ಕುಮಾರ್ ಅವರ ಹೊಸ ಬೆಳಕು ಮೂಡುತಿದೆ ಹಾಡನ್ನು ಹೇಳಿದ್ದು, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ.
ತರೀಕೆರೆ ಪಟ್ಟಣದಲ್ಲು ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಹಾಡು ಹೇಳಲು ಆರಂಭಿಸುತ್ತಿದ್ದಂತೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಾಜೇಶ್, ತರೀಕೆರೆ ಉಪವಿಭಾಗಾಧಿಕಾರಿ ಸಿದ್ದಲಿಂಗಾರೆಡ್ಡಿ, ತರೀಕೆರೆ ತಹಶೀಲ್ದಾರ್ ಪೂರ್ಣಿಮಾ, ಚಿಕ್ಕಮಗಳೂರು ತಹಶೀಲ್ದಾರ್ ವಿನಯ್ ಸಾಗರ್ ಸೇರಿದಂತೆ ಬಹುತೇಕ ಕಂದಾಯ ಇಲಾಖೆಯ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ.ಪ್ರತಿನಿತ್ಯ ಕೆಲಸದ ಒತ್ತಡ ಹಾಗೂ ಜಂಜಾಟದಲ್ಲಿಯೇ ದಿಬ ಕಳೆಯುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಹಾಡಿದ ಹಾಡು ಅಧಿಕಾರಿಗಳಲ್ಲಿ ಹೊಸ ಹುಮ್ಮಸನ್ನು ಮೂಡಿಸಿದ್ದು, ಒತ್ತಡದ ನಡುವೆಯೂ ಕುಣಿದು ಕುಪ್ಪಳಿಸಿದ್ದಾರೆ.
ಕೆಲಸ, ಸಾರ್ವಜನಿಕ ಸಮಸ್ಯೆಗಳ ಮದ್ಯದಲ್ಲೇ ದಿನಕಳೆಯುವ ಅಧಿಕಾರಿಗಳ ಮಾನಸಿಕ ಒತ್ತಡ ಕಡಿಮೆ ಮಾಡುವ ಸಲುವಾಗಿ ತರೀಕೆರೆ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ನೌಕರರ ಕ್ರೀಡಾಕೂಟ ಒಂದು ರೀತಿಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳಲ್ಲಿನ ಜಂಜಾಟ, ತೊಳಲಾಟಗಳನ್ನು ತೊಡೆದು ಹಾಕಿ ಹೊಸತನ ಮೂಡಿಸಿತ್ತು. ಅದರ ಜೊತೆಗೆ ಜಿಲ್ಲಾಧಿಕಾರಿಗಳು ಹಾಡಿದ ಹಾಡು ಅಧಿಕಾರಿಗಳ ಮನಸ್ಸನ್ನು ಟಪ್ಪಂಗೋಚಿ ಮಾಡಿದ್ದು, ಅಧಿಕಾರಿಗಳ ಪಾಲಿಗೆ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿತ್ತು.