ಭ್ರಷ್ಟ ಬೃಹತ್ ತಿಮಿಂಗಿಲಗಳು ಎಸಿಬಿ ಬಲೆಗೆ: ನಗದು, ಆಸ್ತಿ, ಐದು ಸಾವಿರ ಸೀರೆಗಳು ಪತ್ತೆ

ಮಂಗಳವಾರ, 28 ಫೆಬ್ರವರಿ 2017 (16:51 IST)
ರಾಜ್ಯಾದ್ಯಂತ ಇಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೆಲ ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ, ನಗದು ಹಣವನ್ನು ಪತ್ತೆ ಹಚ್ಚಿದ್ದಾರೆ.
 
ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕರಿಯಪ್ಪ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಶಾಕ್ ಉಂಟಾಗಿದೆ. ಕರಿಯಪ್ಪ ಪತ್ನಿ ಶಾಂತಾಗೆ ಸೇರಿದ 5 ಸಾವಿರ ಸೀರೆಗಳು ಪತ್ತೆಯಾಗಿದೆ. 200 ರೂಪಾಯಿಗಳಿಂದ 10 ಸಾವಿರ ರೂಪಾಯಿಗಳವರೆಗೂ ಬೆಲೆಬಾಳುತ್ತವೆ ಎನ್ನಲಾಗಿದೆ. ಏಳು ಲಕ್ಷ ರೂಪಾಯಿ ನಗದು ಕೂಡಾ ಪತ್ತೆಯಾಗಿದೆ
 
 ಬಿಡಿಎ ಎಇಇ ಕುಮಾರ್ ನಿವಾಸ ಬೆಂಗಳೂರಿನಲ್ಲೂ ಎಂಟು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದು, ಬಿಬಿಎಂಪಿಯ ಚೀಫ್ ಎಂಜಿನಿಯರ್ ಆಗಿರುವ ಕೆಟಿ ನಾಗರಾಜು ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ತನಿಖೆ ಮುಂದುವರಿದಿದೆ ಎಂದು ಅನಾಮಧೇಯವಾಗಿರಲು ಬಯಸಿದ ಅಧಿಕಾರಿಗಳು ತಿಳಿಸಿದ್ದಾರೆ.  
 
ಬೆಂಗಳೂರಿನಲ್ಲಿ 2 ಡಿವೈಎಸ್‍ಪಿ ಮತ್ತು ಹಾಸನದಲ್ಲಿ 2 ಡಿವೈಎಸ್ ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಅಪಾರ ಪ್ರಮಾಣದ ಆಸ್ತಿ, ನಗದು ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ