ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗ" ಉದ್ಘಾಟಿಸಿದ ನಟಿ ಪೂಜಾಗಾಂಧಿ

ಭಾನುವಾರ, 5 ಫೆಬ್ರವರಿ 2023 (21:35 IST)
ಕ್ಯಾನ್ಸರ್‌ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಕುರಿತು ಜಾಗೃತಿ ಮೂಡಿಸುವ ಹಾಗೂ ಪತ್ತೆಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಫೋರ್ಟಿಸ್‌ ಆಸ್ಪತ್ರೆಯಲ್ಲಿ "ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗ"ವನ್ನು ತೆರೆಯಲಾಗಿದ್ದು, ನಟಿ ಪೂಜಾಗಾಂಧಿ ಅವರು ಈ ವಿಭಾಗವನ್ನು ಉದ್ಘಾಟಿಸಿದರು.
 
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಪೂಜಾಗಾಂಧಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಸಾಕಷ್ಟು ಕ್ಯಾನ್ಸರ್‌ಗಳ ಬಗ್ಗೆ ಜನರಿಗೆ ಜಾಗೃತಿ ಇಲ್ಲದ ಕಾರಣ ಕೊನೆ ಹಂತಕ್ಕೆ ತಲುಪುವ ವರೆಗೂ ಈ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ. ಆರಂಭದಲ್ಲಿಯೇ ಕ್ಯಾನ್ಸರ್‌ ಪತ್ತೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಫೊರ್ಟಿಸ್‌ ಆಸ್ಪತ್ರೆ ತಂಡವು ಕ್ಯಾನ್ಸರ್‌ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದಲೇ "ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗವನ್ನೇ ತೆರೆದಿರುವುದು ಸ್ವಾಗತಾರ್ಹ ಎಂದರು.
ಫೋರ್ಟಿಸ್‌ನ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ ವಿಭಾಗದ ಹಿರಿಯ ನಿರ್ದೇಶಕಿ ಡಾ.ನಿತಿ ರೈಝಾದ, ಮಾತನಾಡಿ, ಕ್ಯಾನ್ಸರ್‌ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ಒಂದು. ಇದನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಫೊರ್ಟಿಸ್‌ ಆಸ್ಪತ್ರೆಯಲ್ಲಿ ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗದಲ್ಲಿ ಎಲ್ಲಾ ಬಗೆಯ ಕ್ಯಾನ್ಸರ್‌ನನ್ನು ಪತ್ತೆಹಚ್ಚುವ ಅತ್ಯಾಧುನಿಕ ಟೆಕ್ನಾಲಜಿಯೂ ಸಹ ಒಳಗೊಂಡಿದೆ. ಜೊತೆಗೆ, ಬಡವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೆಲ ಸ್ಕ್ರೀನಿಂಗ್‌ ಮೇಲೆ ಸಾಕಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಯಾವುದೇ ಕ್ಯಾನ್ಸರ್‌ ಆದರೂ ಆರಂಭದಲ್ಲಿಯೇ ಪತ್ತೆ ಹಚ್ಚುವುದು ಅತ್ಯಂತ ಅವಶ್ಯಕ. ಜನರ ಆರ್ಥಿಕ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಿವೆಂಟಿವ್‌ ಆಂಕೊಲಾಜಿ ವಿಭಾಗವನ್ನು ತೆರೆಯಲಾಗಿದೆ ಎಂದು ವಿವರಿಸಿದರು. 
ಫೋರ್ಟಿಸ್ ಆಸ್ಪತ್ರೆಗಳ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ, ಪ್ರಸೂತಿ ತಜ್ಞೆ ಡಾ. ಪರಿಮಳಾ ದೇವಿ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ