ಅಂಬರ ಸೇರಿದ ಅಂಬರೀಶ: ಅಗಲಿದ ಪತಿಗೆ ಚುಂಬಿಸಿ ಕಳುಹಿಸಿಕೊಟ್ಟ ಸುಮಲತಾ
ಸೋಮವಾರ, 26 ನವೆಂಬರ್ 2018 (18:24 IST)
ಬೆಂಗಳೂರು: ಮೊನ್ನೆ ನಿಧನರಾದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಾವಿರಾರು ಅಭಿಮಾನಿಗಳ ಜೈಕಾರದ ನಡುವೆ ಕಂಠೀರವ ಸ್ಟುಡಿಯೋಕ್ಕೆ ಮೆರವಣಿಗೆ ಮೂಲಕ ಬಂದ ಅಂಬರೀಶ್ ಪಾರ್ಥಿವ ಶರೀರಕ್ಕೆ ಗೌಡರ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಲಾಯಿತು.
ಇದಕ್ಕೂ ಮೊದಲು ಸರ್ಕಾರದ ಪರವಾಗಿ ಸಿಎಂ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಪರವಾಗಿ ಕೆಸಿ ವೇಣುಗೋಪಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ, ಬಸವರಾಜ ಹೊರಟ್ಟಿ, ಡಿಕೆ ಶಿವಕುಮಾರ್, ಎಚ್ ಡಿ ರೇವಣ್ಣ, ಕೆಜೆ ಜಾರ್ಜ್, ಜಯಮಾಲ, ಆರ್ ಅಶೋಕ್, ಮೇಯರ್ ಗಂಗಾಂಬಿಕೆ ಹೂಗುಚ್ಛ ಸಲ್ಲಿಸಿದರು.
ಚಿತ್ರರಂಗದ ಪರವಾಗಿ ನಟ ಮೋಹನ್ ಬಾಬು ಕುಟುಂಬ, ಬಿ ಸರೋಜಾದೇವಿ, ರವಿಚಂದ್ರನ್, ಶಿವರಾಜ್ ಕುಮಾರ್, ಜಯಪ್ರದಾ, ರಾಜೇಂದ್ರ ಸಿಂಗ್ ಬಾಬು, ನಿಖಿಲ್ ಕುಮಾರಸ್ವಾಮಿ, ದರ್ಶನ್, ರಾಕ್ ಲೈನ್ ವೆಂಕಟೇಶ್, ಯಶ್, ಪುನೀತ್ ರಾಜ್ ಕುಮಾರ್, ಅರ್ಜುನ್ ಸರ್ಜಾ, ದೊಡ್ಡಣ್ಣ, ಚಿನ್ನೇಗೌಡ, ಜಗ್ಗೇಶ್ ಮತ್ತಿತರರು ಅಂತಿಮ ಗೌರವ ಸಲ್ಲಿಸಿದರು.
ಬಳಿಕ ಅಂಬರೀಶ್ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಸಿಎಂ ಕುಮಾರಸ್ವಾಮಿ ಸುಮಲತಾ ಅಂಬರೀಶ್ ಕೈಗೊಪ್ಪಿಸಿದರು. ಈ ವೇಳೆ ಬಿಕ್ಕಿ ಬಿಕ್ಕಿ ಅತ್ತ ಸುಮಲತಾ ನೆರೆದಿದ್ದ ಜನರತ್ತ ಕೈ ಮುಗಿದು ನಮನ ಸಲ್ಲಿಸಿದರು.
ಇದಾದ ಬಳಿಕ ಪುರೋಹಿತರ ಮಾರ್ಗದರ್ಶನದಂತೆ ಪುತ್ರರ ಅಭಿಷೇಕ್ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಪಾರ್ಥಿವ ಶರೀರದ ಮೇಲೆ ಗಂಧದ ಕಟ್ಟಿಗೆಗಳನ್ನು ಇಡುವಾಗ ಪತ್ನಿ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ದುಃಖ ಕಟ್ಟೆಯೊಡೆದಿತ್ತು. ಈ ವೇಳೆ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಯಶ್ ಪಕ್ಕದಲ್ಲೇ ಇದ್ದು ಇಬ್ಬರನ್ನೂ ಸಮಾಧಾನಿಸಿದ ದೃಶ್ಯ ಮನಕಲಕುವಂತಿತ್ತು. ಅಂತಿಮವಾಗಿ ಪುತ್ರ ಅಭಿಷೇಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.