ತಾಜ್ ಮಹಲ್ ಪ್ರವೇಶಿಸಿದ ಮೊದಲ ಉತ್ತರಪ್ರದೇಶದ ಬಿಜೆಪಿ ಸಿಎಂ
ಗುರುವಾರ, 26 ಅಕ್ಟೋಬರ್ 2017 (13:17 IST)
ಆಗ್ರಾ: ಐತಿಹಾಸಿಕ ಸ್ಥಳ ತಾಜ್ ಮಹಲ್ ಕುರಿತು ಒಬ್ಬೊಬ್ಬರು ಒಂದೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಇಂದು ತಾಜ್ ಗೆ ಭೇಟಿ ನೀಡಿದ್ದಾರೆ. ಆದಿತ್ಯನಾಥ್ ಅವರು ತಾಜ್‌ಮಹಲ್ ಪ್ರವೇಶಿಸಿದ ಉತ್ತರಪ್ರದೇಶದ ಪ್ರಥಮ ಬಿಜೆಪಿ ಸಿಎಂ ಎನಿಸಿಕೊಂಡಿದ್ದಾರೆ.
ತಾಜ್ ಭೇಟಿ ಸಂದರ್ಭದಲ್ಲಿ ಸಿಎಂ ಯೋಗಿ ಸೌಧದ ಒಳಗಿನ ಎಲ್ಲಾ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನೀಶ್ ತಿಳಿಸಿದ್ದಾರೆ.
ಸಿಎಂ ಭೇಟಿಗೂ ಮೊದಲು ತಾಜ್ ಸುತ್ತಲೂ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಮಾಜ ಸೇವಕರು ಸ್ವಚ್ಛತಾ ಆಂದೋಲನಾ ನಡೆಸುತ್ತಿದ್ದಾರೆ. ಆಗ್ರಾದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಯೋಗಿ ಚಾಲನೆ ನೀಡಲಿದ್ದಾರೆ. ಆಗ್ರಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬರೋಬ್ಬರಿ 370 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದಾರೆ.
ಪ್ರೇಮ ಸ್ಮಾರಕವಾಗಿರುವ 17ನೇ ಶತಮಾನದ ವಿಶ್ವ ಪ್ರಸಿದ್ಧ ಮೊಘಲ್ ಕಾಲದ ತಾಜ್ ಮಹಲ್, ಶಿವ ದೇವಾಲಯಗಿತ್ತು ಎಂದು ಸಾಬೀತು ಪಡಿಸುವುದಕ್ಕೆ ಯಾವುದೇ ದೃಢವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. 1983ರಲ್ಲಿ ಯುನೆಸ್ಕೋ ತಾಜ್‌ಮಹಲ್ ವಿಶ್ವ ಪಾರಂಪರಿಕ ತಾಣವೆಂದು ಮಾನ್ಯತೆ ನೀಡಿತ್ತು.