ಬೆಂಗಳೂರು: ಇತ್ತೀಚೆಗೆ ಮೈಸೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳ್ಳಾರಿ ಗಣಿ ದೊರೆ ಜನಾರ್ಧನ ರೆಡ್ಡಿ ಬಗ್ಗೆ ನೀಡಿದ ಹೇಳಿಕೆಯೊಂದು ಹೊಸ ತಲೆನೋವು ಸೃಷ್ಟಿಸಿದೆ.
ಗಣಿ ಅಕ್ರಮದಿಂದಾಗಿ ಶಿಕ್ಷೆಗೊಳಗಾಗಿದ್ದ ಬಿಜೆಪಿ ನಾಯಕ ಜನಾರ್ಧನ ರೆಡ್ಡಿಯನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ಶಾ ಅವರಲ್ಲಿ ಪ್ರಶ್ನಿಸಿದಾಗ, ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದರು. ಇದೀಗ ಜನಾರ್ಧನ ರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದೆ.
ಹೇಗಾದರೂ ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಸೋಲುಣಿಸುವ ಶಪಥ ಮಾಡಿದ್ದ ಜನಾರ್ಧನ ರೆಡ್ಡಿಗೆ ಇದರಿಂದ ಹಿನ್ನಡೆಯುಂಟಾಗಿದೆ. ಇದೇ ಕಾರಣಕ್ಕೆ ಸ್ನೇಹಿತ, ಸಂಸದ ಶ್ರೀರಾಮುಲು ಮೂಲಕ ಇದೀಗ ಜನಾರ್ಧನ ರೆಡ್ಡಿಯನ್ನು ಸಮಾಧಾನಿಸುವ ತೆರೆ ಮರೆಯ ಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ. ಜನಾರ್ಧನ ರೆಡ್ಡಿಯನ್ನು ಸಮಾಧಾನಿಸುವಂತೆ ಸ್ವತಃ ಯಡಿಯೂರಪ್ಪ ಶ್ರೀರಾಮುಲುಗೆ ಸೂಚನೆ ನೀಡಿದ್ದಾರೆ ಎಂಬ ಹೇಳಿಕೆ ಬರುತ್ತಿದೆ.
ಈ ನಡುವೆ ಅಮಿತ್ ಶಾ ಹೇಳಿಕೆಯಿಂದ ಬೇಸರಗೊಂಡಿರುವ ಜನಾರ್ಧನ ರೆಡ್ಡಿ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಿದ್ದಾರೆ ಎಂಬ ವರದಿ ಬಂದಿತ್ತು. ಒಂದು ವೇಳೆ ರೆಡ್ಡಿ ಹೀಗೆ ಮಾಡಿದರೆ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ