ಮಧ್ಯರಾತ್ರಿ ವಿಧಾನಸೌಧ ವೀಕ್ಷಣೆಗೆ ಬರುತ್ತಿದ್ದ ಸ್ನೇಹಿತರ ಬೈಕ್ ಅಪಘಾತವಾದ ಪರಿಣಾಮ ಓರ್ವ ಸಾವನ್ನಪ್ಪಿದರೆ ಮತ್ತೋರ್ವ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ಹೈಗ್ರೌಂಡ್ ಸಂಚಾರಿ ಠಾಣಾ ವ್ಯಾಪ್ತಿಯ ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ಬಳಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ಢಿಕ್ಕಿಯಾದ ಪರಿಣಾಮ ರಾಜೇಶ್ ಎಂಬಾತ ಸಾವನ್ನಪ್ಪಿದರೆ ಪರಶುರಾಮ್ ಎಂಬಾತ ಪಾರಾಗಿದ್ದಾನೆ.
ಖಾಸಗಿ ಆಸ್ಪತ್ರೆಯಲ್ಲಿ ಎಸಿ ಟೆಕ್ನಿಶಿಯನ್ ಆಗಿದ್ದ ರಾಜೇಶ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಗೋವಿಂದರಾಜು, ಹಾಗೂ ಪರಶುರಾಮ ಒಂದೇ ರೂಮಿನಲ್ಲಿ ವಾಸವಿದ್ದವರು. ತಡರಾತ್ರಿ ಮದ್ಯಪಾನ ಮಾಡಿ ಬಳಿಕ ವಿಧಾನಸೌಧ ವೀಕ್ಷಿಸಲು ಬೈಕಿನಲ್ಲಿ ತೆರಳಿದ್ದರು.ರಾಜೇಶ್ ಹಾಗೂ ಪರಶುರಾಮ್ ಒಂದು ಬೈಕಿನಲ್ಲಿದ್ದರೆ, ಗೋವಿಂದರಾಜು ಮತ್ತೊಂದು ಬೈಕಿನಲ್ಲಿದ್ದ. ರಾತ್ರಿ 2 ಗಂಟೆ ಸುಮಾರಿಗೆ ತೆರಳುತ್ತಿರುವಾಗ ಪ್ಯಾಲೇಸ್ ರಸ್ತೆಯ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಮಾರ್ಗಕ್ಕೆ ಢಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಿತರಿಬ್ಬರನ್ನ ಗೋವಿಂದರಾಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ ಸಾವನ್ನಪ್ಪಿದ್ದಾನೆ.