ಸೈಟು ಮಾರಾಟಕ್ಕಿದೆ‌ ಬೋರ್ಡ್ ಹಾಕುವವರೇ ಇವನ ಟಾರ್ಗೆಟ್

ಸೋಮವಾರ, 30 ಜನವರಿ 2023 (18:32 IST)
ಸೈಟು‌ ಮಾರಾಟಕ್ಕಿದೆ‌ ಎಂದು ನಿವೇನಾದರೂ ಬೋರ್ಡ್ ಹಾಕಿಕೊಂಡಿದ್ದೀರಾ ? ನಿವೇಶನ ಖರೀದಿ‌ ಮಾಡುವ ಸೋಗಿನಲ್ಲಿ ಡ್ಯಾಕುಮೆಂಟ್ ಕೊಟ್ಟಿದ್ದೀರಾ ? ಹಾಗಾದರೆ ನೀವೂ ವಂಚನೆಗೊಳಗಾಗಿದ್ದೀರಿ ಎಂದೇ ಅರ್ಥ... ಹೌದು ಸೈಟು ಖರೀದಿ ನೆಪದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್ ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿ ಪರಾರಿಯಾಗಿ ಐದು ವರ್ಷಗಳ ಬಳಿಕ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ತುಮಕೂರಿನ ತಿಪಟೂರು ಮೂಲದ ಪ್ರಕರಣ ಪ್ರಮುಖ ರೂವಾರಿ ಲೋಕೇಶ್ ಹಾಗೂ‌ ಸಹಚರ ಆಯುಬ್ ಎಂಬಾತನನ್ನ‌ ಬಂಧಿಸಿ ಸೆರೆಮನೆಗೆ ಅಟ್ಟಲಾಗಿದೆ.‌‌‌ಲೊಕೇಶ್ ಬಂಧನದಿಂದ ಶೇಷಾದ್ರಿಪುರಂ, ಶಂಕರಪುರ, ವಿದ್ಯಾರಣಪುರ ಹಾಗೂ ಜಿಗಣಿ ಸೇರಿ ವಿವಿಧ‌ ಪೊಲೀಸ್ ಠಾಣೆಗಳಲ್ಲಿ‌ ದಾಖಲಾಗಿದ್ದ ಏಳು ಪ್ರಕರಣಗಳನ್ನ‌ ಬೇಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ನಗರದಲ್ಲಿ‌ ಖಾಲಿ‌ ಸೈಟು ಮಾರಾಟಕ್ಕೆ‌ ಲಭ್ಯವಿದೆ ಎಂದು ಎಂದು ಮೊಬೈಲ್‌ ನಂಬರ್ ಸಮೇತ ಬೋರ್ಡ್ ಹಾಕಿಕೊಳ್ಳುವ ಮಾಲೀಕರನ್ನು ಸಂಪರ್ಕಿಸುತ್ತಿದ್ದ ಆರೋಪಿ ಲೊಕೇಶ್, ಸೈಟು ಖರೀದಿಸುವುದಾಗಿ ಹೇಳಿ ಮುಂಗಡವಾಗಿ ಅವರಿಗೆ ಹಣ ನೀಡುತ್ತಿದ್ದ. ತಮ್ಮ ವಕೀಲರಿಗೆ ಸೈಟು ದಾಖಲಾತಿಗಳನ್ನು ತೋರಿಸಬೇಕೆಂದು ಅವರಿಂದ ತೆಗೆದುಕೊಳ್ಳುತ್ತಿದ್ದ. ಬಳಿಕ‌ ಅಸಲಿ ದಾಖಲಾತಿ ರೀತಿ ನಕಲಿ‌‌ ದಾಖಲಾತಿ ಸೃಷ್ಟಿಸಿಕೊಳ್ಳುತ್ತಿದ್ದ. ಕೃತಕವಾಗಿ ಮಾಲೀಕರನ್ನು ಸೃಷ್ಟಿಸಿ ಅವರಿಂದ‌ ನಿವೇಶ‌ನ ಖರೀದಿಸಿರುವುದಾಗಿ ಫೇಕ್‌ ಡ್ಯಾಕುಮೆಂಟ್ ಸೃಷ್ಟಿಸಿಕೊಂಡಿದ್ದ. ಬಳಿಕ ಅದೇ ದಾಖಲಾತಿ ತೆಗೆದುಕೊಂಡು ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಮೊದಲ ಮೂರು ತಿಂಗಳು ಬ್ಯಾಂಕಿಗೆ‌ ಇಎಂಐ ಕಟ್ಟಿ ನಂತರ ಸಾಲ ಪಾವತಿಸದೆ ಕೈಕೊಟ್ಟಿದ್ದ. ಇದೇ ರೀತಿ ಹಲವು ಬ್ಯಾಂಕ್ ಗಳಲ್ಲಿ 2 ಕೋಟಿವರೆಗೂ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಐದು ವರ್ಷಗಳ ಹಿಂದೆ ವಂಚನೆ‌ ಪ್ರಕರಣ ದಾಖಲಾಗಿದ್ದರೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಹಳೆ ಕೇಸ್ ಪೆಡಿಂಗ್ ಬಗ್ಗೆ ಇತ್ತೀಚಿಗೆ ಪರಿಶೀಲನೆ ನಡೆಸಿ ಕೇಂದ್ರ ವಿಭಾಗದ ಡಿಸಿಪಿ‌ ನೀಡಿದ ಸೂಚನೆ ಮೇರೆಗೆ ಮರುತನಿಖೆ‌ ನಡೆಸಿ ಜಾಲಾಡಿದ‌ ಪೊಲೀಸರಿಗೆ ಆರೋಪಿಯನ್ನ ತಿಪಟೂರಿನಲ್ಲಿ ಬಂಧಿಸಿದ್ದಾರೆ.
 
ಪೊಲೀಸ್ ವಿಚಾರಣೆ ವೇಳೆ 'ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದರೂ ಕೇಳಲ್ಲ ನಾನು ಮಾಡಿರುವ ಮೂರ್ನಾಲ್ಕು ಕೋಟಿ ವಂಚನೆ ಬಗ್ಗೆ ಕೇಳೋಕೆ ಬರ್ತಿರಾ ..?ಅವರನ್ನೆಲ್ಲ ಏನೂ ಮಾಡಲ್ಲ.. ನಮ್ಮನ್ನ ಮಾತ್ರ ಪ್ರಶ್ನೆ ಮಾಡ್ತೀರಾ.. ನಾನು ನಿಮಗೆ (ಪೊಲೀಸರು )ವಂಚನೆ ಮಾಡಿಲ್ಲ ಬದಲಿಗೆ ಬ್ಯಾಂಕಿನವರಿಗೆ ಮಾಡಿರೋದು.. ನೀವೇಕೆ ತಲೆ ಕೆಡಿಸಿಕೊಳ್ತೀರಾ' ಎಂದಿದ್ದ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ