ರೈತರೊಬ್ಬರಿಂದ ಲಂಚದ ಹಣ ಪಡೆಯುವಾಗಿ ಅಧಿಕಾರಿಯೊಬ್ಬರು ಎಸಿಬಿ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗಾ ಹೋಬಳಿ ದಾಸಲುಕುಂಟೆ ಗ್ರಾಮದ ನಿವಾಸಿ ಮಂಜುನಾಥ್ ಎಂಬ ರೈತನಿಂದ 15 ಸಾವಿರ ರೂ.ಗಳ ಲಂಚದ ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಚನ್ನೇಗೌಡ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.
ದಾಸಲುಕುಂಟೆ ಗ್ರಾಮದ ಮಂಜುನಾಥ್ ಅವರ ತಾಯಿ ನಾಗರತ್ನಮ್ಮ ಅವರ ಹೆಸರಿಗೆ ಕ್ರಯವಾಗಿರುವ ದಾಸಲುಕುಂಟೆ ಗ್ರಾಮದ ಸರ್ವೇ ನಂ.34 ರ ಎರಡು ಎಕರೆ 37 ಗುಂಟೆ ಜಮೀನಿನ ಪಹಣಿ ಮತ್ತು ಖಾತೆ ಬದಲಾವಣೆ ಮಾಡಿಸಿಕೊಡುವ ಸಲುವಾಗಿ ಗ್ರಾಮ ಲೆಕ್ಕಿಗ ಚನ್ನೇಗೌಡ 30 ಸಾವಿರ ರೂ.ಗಳ ಹಣಕ್ಕೆ ಬೇಡಿಕೆ ಇಟ್ಟು ನಂತರ 15 ಸಾವಿರ ರೂ.ಗಳಿಗೆ ಒಪ್ಪಿ ಮುಂಗಡವಾಗಿ 5 ಸಾವಿರ ರೂ. ಹಣವನ್ನು ಪಡೆದುಕೊಂಡಿರುತ್ತಾನೆ.
ಗ್ರಾಮ ಲೆಕ್ಕಾಧಿಕಾರಿ ಕಛೇರಿಯಲ್ಲಿ ಉಳಿದ ಲಂಚದ ಹಣವನ್ನು ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಬಿ.ಉಮಾಶಂಕರ್ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ವಿ.ಪ್ರವೀಣ್ ಕುಮಾರ್ ಅವರು ದಾಳಿ ನಡೆಸಿ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.