ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಸಿಎಂ ಮಧ್ಯಪ್ರವೇಶಿಸಿದರೂ ಸಮಸ್ಯೆ ನಿಂತಿಲ್ಲ

Krishnaveni K

ಶುಕ್ರವಾರ, 6 ಡಿಸೆಂಬರ್ 2024 (11:30 IST)
ಬಳ್ಳಾರಿ: ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಆತಂಕ ಇನ್ನೂ ಮುಂದುವರಿದಿದೆ. ಇಂದು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ವರದಿಯಾಗಿದ್ದು ಆತಂಕ ಮನೆ ಮಾಡಿದೆ.

25 ವರ್ಷ ಸುಮಯಾ ಎಂಬಾಕೆ ಮೃತಪಟ್ಟವರು. ಕಳೆದ 23 ದಿನಗಳಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿಗೀಡಾದ ಬಾಣಂತಿಯರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಮೊನ್ನೆಯಷ್ಟೇ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲು ಖಡಕ್ ಆದೇಶ ನೀಡಿದ್ದರು.

ಬಾಣಂತಿ ಸುಮಯಾಗೆ ಸಿಸೇರಿಯನ್ ಹೆರಿಗೆಯಾಗಿತ್ತು. ಹೀಗಾಗಿ ನವಂಬರ್ 12 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಐವಿ ದ್ರಾವಣದಲ್ಲಿ ದೋಷಗಳಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಮೊದಲು ಬಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಕಳಪೆ ಗುಣಮಟ್ಟದ ಐವಿ ದ್ರಾವಣದಿಂದಲೇ ಸಾವುಗಳಾಗುತ್ತಿವೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಐವಿ ದ್ರಾವಣ ಪೂರೈಕೆ ಮಾಡುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ