ಬೆಂಗಳೂರು, ಕೋಲಾರ ಸುತ್ತಮುತ್ತ ಇನ್ನೆರಡು ದಿನ ಮಳೆ; ನೆರೆಯ ರಾಜ್ಯಗಳಲ್ಲೂ ವರುಣನ ಅಬ್ಬರ

ಭಾನುವಾರ, 30 ಜನವರಿ 2022 (19:40 IST)
ಇಂದು ದಕ್ಷಿಣ ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಮಳೆಯಾಗಲಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ.
 
ಬೆಂಗಳೂರು:-ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಲಘು ಮಳೆಯಾಗಲಿದೆ.
ಚಳಿಗಾಲದಲ್ಲಿ ಮಳೆಯಾಗುವುದು ಅಸಾಮಾನ್ಯವೇನಲ್ಲ. ಹವಾಮಾನದಲ್ಲಿ ಬದಲಾವಣೆಯಗುತ್ತಿರುವುದರಿಂದ ಮುಂದಿನ ತಿಂಗಳ ಮಧ್ಯ ಭಾಗದವರೆಗೂ ಮಳೆ, ಚಳಿಯ ಕಣ್ಣಾಮುಚ್ಚಾಲೆ ಆಟ ಮುಂದುವರೆಯಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು ದಕ್ಷಿಣ ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಲಘು ಮಳೆಯ ಮುನ್ಸೂಚನೆ ನೀಡಿದೆ. ಇಂದು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಮತ್ತು ಮುಂದಿನ 4 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಮಳೆಯ ತೀವ್ರತೆಯು ತುಂಬಾ ಕಡಿಮೆಯಿರುವ ನಿರೀಕ್ಷೆಯಿದೆ.
ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿ ಜನರನ್ನು ಎಚ್ಚರಿಸಿದ್ದಾರೆ. ಮಳೆಯು ಒಂದು ಅಥವಾ ಎರಡು ದಿನಗಳವರೆಗೆ ಇರುತ್ತದೆಯಾದರೂ, ದೀರ್ಘಕಾಲದ ಮಾನ್ಸೂನ್ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜನವರಿಯಲ್ಲಿ ದಕ್ಷಿಣ ಭಾರತದಲ್ಲಿ ಮಳೆಯು ಅತ್ಯಲ್ಪವಾಗಿದೆ ಮತ್ತು ಇಡೀ ಪರ್ಯಾಯ ದ್ವೀಪವು ವರ್ಷದ ಮೊದಲ ತಿಂಗಳಲ್ಲಿ ಸರಾಸರಿ 10 ಮಿ.ಮೀಗಿಂತ ಕಡಿಮೆ ಮಳೆಯನ್ನು ಹೊಂದಿದೆ. ಈ ವರ್ಷ ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಮಳೆ ಕೈ ಕೊಟ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.
ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಳೆ ಅಥವಾ ಹಿಮ ಉಂಟಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡ ಮಳೆಯಾಗಲಿದೆ. ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ ಮತ್ತು ಒಡಿಶಾದಲ್ಲಿ ಶೀತ ಅಲೆಗಳ ಸಾಧ್ಯತೆಯಿದೆ.
ಈ ವಾರ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಮುಂದಿನ ವಾರವೂ ಇದೇ ಮಾದರಿ ಮುಂದುವರಿಯುವ ಸಾಧ್ಯತೆಯಿದೆ. ಕೊಚ್ಚಿ ಮತ್ತು ಚೆನ್ನೈ ಮುಂದಿನ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಆದರೆ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಬೆಳಿಗ್ಗೆ ಮಂಜು ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ.
ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನಲ್ಲಿ ಮಳೆಯಾಗಲಿದೆ. ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಒಡಿಶಾ, ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ, ವಿದರ್ಭ, ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ಶೀತ ಗಾಳಿ ಉಂಟಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ