ಅನುಪಮಾ ಶೆಣೈ ಏನು ಹೈಕಮಾಂಡ್? ಎಂದು ಗುಡುಗಿದ ಪರಮೇಶ್ವರ್ ನಾಯ್ಕ

ಬುಧವಾರ, 8 ಜೂನ್ 2016 (12:10 IST)
ನನ್ನ ರಾಜೀನಾಮೆಯನ್ನು ಕೇಳಲು ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಏನು ಹೈಕಮಾಂಡ್ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ ಪ್ರಶ್ನಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್ ನಾಯ್ಕ, ನನ್ನ ವಿರುದ್ಧ ಅನುಪಮಾ ಶೆಣೈ ಅವರು ಮೊದಲು ಸಿಡಿ ಬಿಡುಗಡೆ ಮಾಡಲಿ. ನಾನು ಏಕಪತ್ನಿ ವೃತಸ್ಥ ಇದು ನೂರಕ್ಕೆ ನೂರು ಸತ್ಯ. ಇದುವರೆಗೂ ನಾನು ಹಾನಗಲ್ ಗೆಸ್ಟ್ ಹೌಸ್‌ಗೆ ತೆರಳಿಲ್ಲ. ರಾಜಕೀಯದಲ್ಲಿ ನನ್ನ ಏಳಿಗೆ ಸಹಿಸದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 
ನನ್ನ ರಾಜೀನಾಮೆಯನ್ನು ಕೇಳಲು ಅನುಪಮಾ ಶೆಣೈ ಯಾರು? ನನ್ನ ರಾಜೀನಾಮೆ ಕೇಳಲು ಅವರೇನು ಹೈಕಮಾಂಡ್? ಏನು ತಪ್ಪು ಮಾಡದ ನಾನು ಏಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಅನುಪಮಾ ಶೆಣೈ ಅವರು ಮೊದಲು ನನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲಿ. ನಂತರ ನನ್ನ ರಾಜೀನಾಮೆ ಕೇಳಲಿ ಎಂದು ಪರಮೇಶ್ವರ್ ನಾಯ್ಕ ಹೇಳಿದರು.
 
ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಕುರಿತು ನಾನು ಭಯಪಡುವ ಅವಶ್ಯಕತೆ ಇಲ್ಲ. ಕಳೆದ 8 ವರ್ಷಗಳಿಂದ ರಾಜಕೀಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ವಿರುದ್ಧ ಯಾವ ಆರೋಪಗಳು ಇಲ್ಲ ಎಂದು ಹೇಳಿದ್ದಾರೆ.
 
ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರ ರಾಜೀನಾಮೆಗೂ ನನ್ನಗೂ ಯಾವ ಸಂಬಂಧವೂ ಇಲ್ಲ. ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಅವರ ರಾಜೀನಾಮೆ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ