ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ಹಿನ್ನೆಲೆಯಲ್ಲಿ ಅವರು ಹೋಗುವ ರಸ್ತೆ ಮಾರ್ಗದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಎಲ್ಲಿಗೆ ಬೇಕಾದರೂ ಬಂದು ಹೋಗಲಿ ನಮಗೇನು? ಅದು ಅವರ ಪಕ್ಷದ ಅನುಕೂಲಕ್ಕೆ ಮಾಡುತ್ತಿರುವ ಕಾರ್ಯಕ್ರಮ. ಆದರೆ ಇದರಿಂದ ಜನರಿಗೆ ಯಾಕೆ ಅನಾನುಕೂಲ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದರು.
ಮೋದಿ ಅವರಿಗೆ ಏನು ಭದ್ರತೆ ಬೇಕೋ ಅದನ್ನು ಕೊಡಲಿ. ಬೇಕಾದರೆ ರೋಡ್ ಶೋ ಮಾಡಲಿ. ಆದರೆ ವಿದ್ಯಾರ್ಥಿಗಳನ್ನು ಯಾಕೆ ಅನುಮಾನದಿಂದ ನೋಡುತ್ತಿರಿ? ನಿಮ್ಮ ಅನುಕೂಲಕ್ಕೆ ಜನರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅವರು ಕೇಳಿದರು.
ರಾಜ್ಯದಲ್ಲಿ 40 ಪರ್ಸೆಂಟ್ ಸರಕಾರ ಎಂದು ಜನರು ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಮೋದಿ ಮಾತನಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.