ಬೆಸ್ಕಾಂ ವಿದ್ಯುತ್ ಅದಾಲತ್ ಗೆ ಗ್ರಾಹಕರಿಂದ ಬೇಡಿಕೆಗಳ ಮಹಾಪೂರ
ಶನಿವಾರ, 18 ಜೂನ್ 2022 (20:34 IST)
ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ಇಂದು ಏರ್ಪಡಿಸಿದ್ದ ಮೊದಲ ವಿದ್ಯುತ್ ಅದಾಲತ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಾವು ಎದುರಿಸುತ್ತಿರುವ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಸೆಳೆದರು.ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರಿಂದ ಹಿಡಿದು ಬೆಸ್ಕಾಂ ನಿಗಮ ಕಚೇರಿಗಳ ಹಿರಿಯ ಅಧಿಕಾರಿಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆದ ಮೊದಲ ವಿದ್ಯುತ್ ಅದಾಲತ್ ನಲ್ಲಿ ಭಾಗವಹಿಸಿ ಜನರ ಅಹಾವಾಲುಗಳನ್ನು ಸ್ವೀಕರಿಸಿದರು. ಹೊಸ ಪರಿವರ್ತಕಗಳು, ಹೆಚ್ಚುವರಿ ವಿದ್ಯುತ್ ಕಂಬಗಳು, ಹೊಸ ವಿದ್ಯುತ್ ಸಂಪರ್ಕ, ಗುಣಮಟ್ಟದ ವಿದ್ಯುತ್ ಪೂರೈಕೆ, ಹಳೆ ಲೈನ್ ಬದಲಾವಣೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಗ್ರಾಹಕರು ಬೆಸ್ಕಾಂ ಅಧಿಕಾರಿಗಳ ಮುಂದಿಟ್ಟರು. ಗ್ರಾಮೀಣ ಭಾಗದ ಅದರಲ್ಲೂ ಬೆಸ್ಕಾಂನ ಗಡಿ ಭಾಗದ ತಾಲೂಕುಗಳ ಹಳ್ಳಿಗಳಲ್ಲಿ ವಿದ್ಯುತ್ ಅದಾಲತ್ ಗಳನ್ನು ಆಯೋಜಿಸಿ, ಗ್ರಾಹಕರ ಆಹವಾಲುಗಳನ್ನು ಪಡೆಯಲಾಯಿತು. ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಗಳನ್ನು ಆಯೋಜಿಸಲಾಗಿತ್ತು. ಗ್ರಾಹಕರು ತಾವು ಎದುರಿಸುತ್ತಿರುವ ದಿನ ನಿತ್ಯದ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಹೆಚ್ಚಾಗಿ ಬಿಲ್ಲಿಂಗ್, ವಿದ್ಯುತ್ ವ್ಯತ್ಯಯ, ಹೊಸ ಸಂಪರ್ಕ, ಹೊಸ ಟ್ರಾನ್ಸ್ ಫಾರ್ಮರ್ , ಎಲ್ ಟಿ ಲೈನ್ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್ ನಲ್ಲಿ ಅಧಿಕಾರಿಗಳ ಗಮನಸೆಳೆದರು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.