ಚಿನ್ನ ಕಳ್ಳತನ ಮಾಡಿದ ಕಳ್ಳ ಎಲ್ಲಿ ಬಚ್ಚಿಡುತ್ತಿದ್ದ ಗೊತ್ತಾ?
ಶುಕ್ರವಾರ, 30 ನವೆಂಬರ್ 2018 (18:40 IST)
ಆತ ಬಲು ಐನಾತಿ ಕಳ್ಳ. ತಾನು ಕಳ್ಳತನ ಮಾಡಿದ ಚಿನ್ನವನ್ನು ಮೋರಿಯಲ್ಲಿ ಬಚ್ಚಿ ಇಡುತ್ತಿದ್ದ. ಹೀಗೆ ಖತರನಾಕ್ ಐಡಿಯಾ ಮಾಡಿದ್ದ ಕಳ್ಳ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳನ್ನು ಮೋರಿಯಲ್ಲಿ ಬಚ್ಚಿಟ್ಟು ನಂತರ ಅವುಗಳನ್ನು ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಮೋರಿ ಕಾಂತ ಸೇರಿ ಮೂವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ 1 ಕೆಜಿ 615 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಣ್ಯ 1ನೇ ಹಂತದ ಕಾಂತರಾಜ್ ಅಲಿಯಾಸ್ ಮೋರಿ ಕಾಂತ (42), ತಮಿಳುನಾಡಿನ ಗುಡಿಯಾತಂನ ಪಾಂಡಿಯನ್ (27) ಹಾಗೂ ಚೆನ್ನೈನ ಕಣ್ಣಗೈ ನಗರದ ಅಣ್ಣಾಮಲೈ (25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.
ಕಳವು ಮಾಡಿದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವಾಗ ಬೆನ್ನಟ್ಟಿ ಬಂದ ಸ್ಥಳೀಯರಿಂದ ಮೋರಿಯಲ್ಲಿ ಬಚ್ಚಿಟ್ಟುಕೊಂಡು ತಪ್ಪಿಸಿಕೊಳ್ಳುತ್ತಿದ್ದ ಮೋರಿ ಕಾಂತ. ತನ್ನ ಮುಂದಿನ ಕಳವುಗಳಿಗೆ ಮೋರಿಯನ್ನೇ ಅವಲಂಬಿಸಿದ್ದ. ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳವು ಮಾಡಿದ ಚಿನ್ನಾಭರಣಗಳನ್ನು ಬಟ್ಟೆಯಲ್ಲಿ ಕಟ್ಟಿ, ಮೋರಿಯಲ್ಲಿ ಬಚ್ಚಿಟ್ಟು, ಒಂದೆರೆಡು ದಿನಗಳ ನಂತರ ಅವುಗಳನ್ನು ತೆಗೆದುಕೊಂಡು ಮಾರಾಟ ಮಾಡಿ, ಮದ್ಯಪಾನ, ಇನ್ನಿತರ ದುಶ್ಚಟಗಳಿಗೆ ಬಳಸುತ್ತಿದ್ದ.
ಹಲವು ಕಳ್ಳತನಗಳಲ್ಲಿ ಮೋರಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಟ್ಟಿದ್ದರಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯು ಮೋರಿಯ ಮೇಲೆ ನಂಬಿಕೆ ಇಟ್ಟುಕೊಂಡು ಅದನ್ನೇ ಅನುಸರಿಸಿಕೊಂಡು ಬಂದಿದ್ದರಿಂದ ಆತನಿಗೆ ಮೋರಿ ಕಾಂತ ಎನ್ನುವ ಹೆಸರು ಬಂದಿತ್ತು.