ವಿಜಯಪುರ : ಸರಳತೆಯ ಸ್ವರೂಪ ಶ್ರೀ ಸಿದ್ದೇಶ್ವರ ಶ್ರೀಗಳ ಚಿತೆಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರಿಗೆ ಚಿತೆಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ವಿಜಯಪುರದ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರದ ಸ್ಥಳದ ದರ್ಶನಕ್ಕೆ ಭಕ್ತರು ಸಾಲು ಗಟ್ಟಿ ಆಗಮಿಸುತ್ತಿದ್ದಾರೆ. ಇತ್ತ ಶ್ರೀಗಳ ಚಿತಾಭಸ್ಮವನ್ನು ವಿಸರ್ಜಿಸುವ ಬಗ್ಗೆ ಇತರೆ ಶ್ರೀಗಳು ಚರ್ಚೆ ನಡೆಸುತ್ತಿದ್ದಾರೆ.
ಗುರುವಾರ ಮೂರನೇ ದಿನದ ಕಾರ್ಯಕ್ರಮ ನಡೆಯಲಿದೆ. ಚಿತೆಗೆ ಹಾಲು, ನೀರು ಹಾಕಿ ಮಂತ್ರಗಳೊಂದಿಗೆ ಪೂಜೆ ಸಲ್ಲಿಸಿ ಮುಂದಿನ ಕಾರ್ಯಕ್ರಮ ಮಾಡಲಾಗುತ್ತೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಮೂರನೇ ದಿನವಾದ ಇಂದು (ಗುರುವಾರ) ಮುಂದಿನ ವಿಧಿ-ವಿಧಾನ ಕಾರ್ಯಕ್ರಮಗಳು ನಡೆಯಲಿವೆ. ಚಿತೆಯನ್ನ ಯಾವ ನದಿಯಲ್ಲಿ ಬಿಡುವುದು, ಯಾವಾಗ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು.
ಅಲ್ಲದೆ ಶ್ರೀಗಳ ಚಿತೆಯ ಭಸ್ಮವನ್ನ ಭಕ್ತರಿಗೆ ನೀಡುತ್ತೇವೆ ಅಂತಾ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ಹೇಳಿದ್ದರು. ಆದ್ರೆ ಯಾರಿಗೂ ಚಿತಾ ಭಸ್ಮವನ್ನ ಕೊಡಲ್ಲ. ವಿಭೂತಿಯನ್ನ ಭಕ್ತರು ತಂದು ಚಿತೆಯ ಹತ್ತಿರ ಇಟ್ಟು ಅದನ್ನೇ ಅವರು ಮನೆಗಳಲ್ಲಿ ಪೂಜಿಸಬೇಕು ಅಂತಾ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.