ಬೆಂಗಳೂರು: ಇತ್ತೀಚೆಗೆ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಒಂದೊಂದೇ ಗಣ್ಯರ ಹೆಸರು ಈಗ ಬೆಳಕಿಗೆ ಬರುತ್ತಿದೆ. ಇದೀಗ ನಟಿ ಆಶಿರಾಯ್ ರೇವ್ ಪಾರ್ಟಿಯಲ್ಲಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ ತಮ್ಮ ಹೆಸರು ಹೊರಬರುತ್ತಿದ್ದಂತೇ ನಾನು ಅಲ್ಲಿರಲಿಲ್ಲ ಎಂದು ಆಶಿರಾಯ್ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ.
ರೇವ್ ಪಾರ್ಟಿಗೆ ಬಂದವರು ಡ್ರಗ್ಸ್ ಹಂಚಿಕೆಯಾಗಿತ್ತು ಎಂಬುದಕ್ಕೆ ಪೊಲೀಸರಿಗೆ ಪುರಾವೆ ಸಿಕ್ಕಿದೆ. ಈ ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಇವರಲ್ಲಿ ಕೆಲವು ತೆಲುಗು ಮೂಲದ ನಟಿಯರು ಸೇರಿದ್ದರು. ಈಗಾಗಲೇ ತೆಲುಗು ನಟಿ ಹೇಮಾ ಘಟನಾ ಸ್ಥಳದಲ್ಲಿದ್ದರು ಎಂಬುದನ್ನು ಖುದ್ದು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ.
ಆದರೆ ಹೇಮಾ ದಾಳಿ ನಡೆಯುತ್ತಿರುವಾಗಲೇ ಅದೇ ಫಾರ್ಮ್ ಹೌಸ್ ನಿಂದ ವಿಡಿಯೋ ಮಾಡಿ ಹೈದರಾಬಾದ್ ನಲ್ಲಿದ್ದೆ ಎಂದು ನಾಟಕವಾಡಿದ್ದರು. ಅವರ ನಾಟಕ ಮುಗಿಯುತ್ತಿದ್ದಂತೇ ಇದೀಗ ಇನ್ನೊಬ್ಬ ನಟಿ ಆಶಿರಾಯ್ ಕೂಡಾ ಅದೇ ರೀತಿ ನಾನು ಅಲ್ಲಿರಲೇ ಇಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ.
ಆದರೆ ನಟಿ ಆಶಿರಾಯ್ ಕೂಡಾ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಪೊಲೀಸರು ಬರುತ್ತಿದ್ದಂತೇ ಪರಾರಿಯಾಗಿದ್ದರು ಎಂಬುದು ತಿಳಿದುಬಂದಿದೆ. ಇದೀಗ ಪಾರ್ಟಿಯಲ್ಲಿ ಸಿಕ್ಕಿಬಿದ್ದವರು ಮತ್ತು ಪರಾರಿಯಾದವರ ಎಲ್ಲರ ವಿವರ ಪಡೆದು ಪೊಲೀಸರು ರಕ್ತ, ಕೂದಲು ಮಾದರಿ ತೆಗೆದುಕೊಂಡು ಡ್ರಗ್ಸ್ ಸೇವಿಸಿದ್ದರೇ ಎಂದು ಪರೀಕ್ಷೆಗೊಳಪಡಿಸುತ್ತಿದ್ದಾರೆ.