ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ಭಾರತಕ್ಕೆ ಕರೆತರಲು ಮತ್ತೊಮ್ಮೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಈ ಮೊದಲು ಪ್ರಜ್ವಲ್ ಹುಡುಕಾಟಕ್ಕೆ ಸಹಾಯ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ಯಾರ ಕೈಗೂ ಸಿಗದೇ ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ.
ಪ್ರಜ್ವಲ್ ಎಲ್ಲಿದ್ದಾರೆಂಬ ಸುಳಿವು ನಮಗೂ ಇಲ್ಲ ಎಂದು ಎಚ್ ಡಿ ರೇವಣ್ಣ ಕೂಡಾ ಹೇಳುತ್ತಿದ್ದಾರೆ. ಇತ್ತ ಎಚ್ ಡಿ ಕುಮಾರಸ್ವಾಮಿ ಕೂಡಾ ಪ್ರಜ್ವಲ್ ರೇವಣ್ಣ ನಮ್ಮ ಸಂಪರ್ಕದಲ್ಲಿಲ್ಲ ಎಂದಿದ್ದಾರೆ. ಈ ನಡುವೆ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ನೀಡಿಯೂ ಪ್ರಯೋಜನವಾಗಿಲ್ಲ.
ಇದೀಗ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಬೇಕು ಎಂದು ಆಗ್ರಹಿಸಿ ಕೇಂದ್ರಕ್ಕೆ ಸಿಎಂ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಪಡಿಸಿದರೆ ಪ್ರಜ್ವಲ್ ವಾಪಸ್ ಬರಲೇಬೇಕಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ವಿದೇಶಾಂಗ ಇಲಾಖೆ ಮಧ‍್ಯಪ್ರವೇಶಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.