ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಷ್ಟೋ ಮಂದಿ ಪರಭಾಷಿಕರು ನೆಲೆಸಿದ್ದಾರೆ. ಉದ್ಯೋಗದ ಕಾರಣಕ್ಕೆ ಇಲ್ಲಿಗೆ ಬಂದರೂ ಇಲ್ಲಿನ ಭಾಷೆ ಕಲಿಯದೇ ತಮ್ಮದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಇದೇ ರೀತಿ ಹಿಂದಿ ಭಾಷಿಕನೊಬ್ಬ ತನ್ನ ಭಾಷೆಯಲ್ಲಿ ಮಾತನಾಡಿದ್ದ ಕ್ಯಾಬ್ ಚಾಲಕ ಕನ್ನಡದಲ್ಲಿ ಮಾತನಾಡು ಎಂದು ಜಬರ್ದಸ್ತು ಮಾಡಿದ ವಿಡಿಯೋ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಯಾರೋ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಕನ್ನಡಿಗ ಕ್ಯಾಬ್ ಚಾಲಕನೊಬ್ಬ ಹಿಂದಿ ಭಾಷಿಕನನ್ನು ಕೂರಿಸಿಕೊಂಡು ಪ್ರಯಾಣಿಸುತ್ತಿದ್ದ. ಈ ವೇಳೆ ಬಹುಶಃ ಎಸಿ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ವಿಡಿಯೋದಲ್ಲಿ ಹಿಂದಿ ಭಾಷಿಕ ಕೂಲ್ ಆಗಿ ಮಾತನಾಡುತ್ತಿದ್ದರೆ ಕ್ಯಾಬ್ ಚಾಲಕ ಗರಂ ಆಗಿ ಕನ್ನಡದಲ್ಲಿ ಮಾತನಾಡು ಎಂದು ಜಬರ್ದಸ್ತು ಮಾಡುತ್ತಿದ್ದಾನೆ.
ನಾನು ಎಸಿ ಹಾಕಲ್ಲ, ಎಸಿ ಸರಿ ಇಲ್ಲ ಗುರೂ. ಕನ್ನಡದಲ್ಲಿ ಮಾತನಾಡು. ಬೇರೆ ಭಾಷೆ ಎಲ್ಲ ಬೇಡ. ಕನ್ನಡದಲ್ಲಿ ಮಾತನಾಡು, ಇಲ್ಲದೇ ಇದ್ರೆ ತಿ* ಮುಚ್ಕೊಂಡು ಇಳಿದು ಹೋಗು. ನನಗೆ ಪ್ರಾಬ್ಲಂ ಆಗುತ್ತದೆ ಎಂದು ಗರಂ ಆಗಿ ಪ್ರಯಾಣಿಕನಿಗೆ ಹೇಳಿದ್ದಾನೆ. ಇದಕ್ಕೆ ಪ್ರಯಾಣಿಕ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದಾನೆ.
ನಿಮಗೆ ಏನು ಪ್ರಾಬ್ಲಂ? ನಿಮಗೆ ನಮ್ಮನ್ನು ಗಾಡಿಯಲ್ಲಿ ಕೂರಿಸಲು ಪ್ರಾಬ್ಲಂ ಆಗುತ್ತಿದೆ ಎಂದಾದರೆ ನಮ್ಮನ್ನು ಇಳಿಸಿ. ಇಷ್ಟು ಹೊತ್ತು ಕೂಲ್ ಆಗಿದ್ದು ಈಗ ಇದ್ದಕ್ಕಿದ್ದ ಹಾಗೆ ಗರಂ ಆಗಿದ್ದು ಯಾಕೆ ಎಂದು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪ್ರಶ್ನಿಸುತ್ತಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರ-ವಿರೋಧ ಚರ್ಚೆ ಹುಟ್ಟು ಹಾಕಿದೆ.
ಕನ್ನಡ ಮಾತನಾಡು ಎಂದು ನಯವಾಗಿ ಹೇಳಬಹುದಿತ್ತು ಜಬರ್ದಸ್ತು ಮಾಡುವ ಅಗತ್ಯವೇನಿತ್ತು. ಒಂದು ವೇಳೆ ಪರಭಾಷಿಕರನ್ನು ಕೂರಿಸಲು ಇಷ್ಟವಿಲ್ಲವೆಂದರೆ ಹಾಗೆಯೇ ಬೋರ್ಡ್ ಹಾಕಬಹುದಿತ್ತು. ಅದನ್ನು ಬಿಟ್ಟು ಹೀಗೆ ಮಾಡಿ ಕನ್ನಡಿಗರಿಗೆ ಅವಮಾನ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಆ ಹಿಂದಿವಾಲ ವಿಡಿಯೋ ಮಾಡುವ ಮೊದಲು ಏನೋ ಕಿರಿಕ್ ಮಾಡಿರಬೇಕು. ಅದಕ್ಕೇ ಹೀಗೆ ಕ್ಯಾಬ್ ಚಾಲಕ ಮಾತನಾಡ್ತಿದ್ದಾನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.