ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ

ಮಂಗಳವಾರ, 9 ನವೆಂಬರ್ 2021 (20:46 IST)
ಬೆಂಗಳೂರು: ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೀವನ್‌ ಭೀಮಾನಗರ ಪೊಲೀಸರ ಬಂಧನಕ್ಕೆ ಒಳಗಾಗಿದ್ದ ಬಿಟ್ ಕಾಯಿನ್ ಪ್ರಕರಣದ ಆರೋಪಿ  ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ಜ್ಯುವೆಲ್ಲರಿ ಶಾಪ್ ಮಾಲೀಕನ ಪುತ್ರ ವಿಷ್ಣು ಭಟ್​​ನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ಪೊಲೀಸರು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಿಷ್ಣು ಭಟ್​​ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಪರಿಗಣಿಸಿದ ನ್ಯಾಯಾಧೀಶರು, ನ.11ರವರೆಗೆ ವಿಷ್ಣು ಭಟ್​ನನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಮತ್ತೋರ್ವ ಆರೋಪಿ ಶ್ರೀಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೀವನ್‌ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್​ನಲ್ಲಿ ಶ್ರೀಕಿ ಹಾಗೂ ವಿಷ್ಣು ಭಟ್ ಇಬ್ಬರು ತಂಗಿರುವಾಗ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಮಾದಕವಸ್ತು ಸೇವಿಸಿರುವುದು ದೃಢವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿ ಗುರುತಿಸಿಕೊಂಡಿದ್ದ ಶ್ರೀಕಿ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿ, ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಸಿಬಿ ಹಾಗೂ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು.
ಜಾಮೀನಿನ ಮೇರೆಗೆ ಹೊರಬಂದಿದ್ದ ಶ್ರೀಕಿ, ಆಭರಣ ಅಂಗಡಿ ಮಾಲೀಕನ ಪುತ್ರ ವಿಷ್ಣು ಭಟ್ ಜೊತೆ ನಂಟು ಬೆಳೆದಿತ್ತು. ಐಷಾರಾಮಿ ಹೊಟೇಲ್​​ನಲ್ಲಿ ರೂಂ ಬುಕ್ ಮಾಡುವುದಕ್ಕೆ ವಿಷ್ಣು ಹಣ ಸಂದಾಯ ಮಾಡುತ್ತಿದ್ದ. ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಸಲುಗೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ಶ್ರೀಕೃಷ್ಣ ನನಗೆ ಗೊತ್ತೇ ಇಲ್ಲ. ಸ್ನೇಹಿತನ ಭೇಟಿಗಾಗಿ ಖಾಸಗಿ ಹೊಟೇಲ್​ಗೆ ಹೋಗಿದ್ದೆ. ಅಲ್ಲಿ ಶ್ರೀಕೃಷ್ಣ ಇರುವುದು ನನಗೆ ಗೊತ್ತಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿರುವುದಾಗಿ ತಿಳಿದುಬಂದಿದೆ. ಡ್ರಗ್ಸ್​ ಸೇವನೆ ದೃಢವಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಮನೆಗಳ ಮೇಲೆ ಭಾನುವಾರ ದಾಳಿ ನಡೆಸಿ, ವಿಷ್ಣು ಮನೆಯಲ್ಲಿ ಆಲ್ಪಜೋರಂ ಹೆಸರಿನ ಮಾದಕ ವಸ್ತು ತುಂಬಿರುವ ಐದು ಸಿಗರೇಟುಗಳು ಹಾಗೂ ಆಲ್ಪಜೋಲಂ ಪೌಡರ್ ಪತ್ತೆಯಾಗಿತ್ತು. ಶ್ರೀಕಿ ಉಳಿದುಕೊಂಡಿದ್ದ ಹೊಟೇಲ್ ಕೊಠಡಿಯಲ್ಲಿ ಮಾದಕವಸ್ತು ಪತ್ತೆಯಾಗಿರಲಿಲ್ಲ.
ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲು:
ವಿಷ್ಣು ಭಟ್‌ ವಿದೇಶಿ ಡ್ರಗ್‌ ಪೆಡ್ಲರ್‌ ಜತೆ ಸಂಪರ್ಕದಲ್ಲಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ