ಜೈಲು ಸೇರಿದ್ದ ಬಿ ನಾಗೇಂದ್ರಗೆ ಮತ್ತೇ ಒಲಿಯುತ್ತಾ ಸಚಿವ ಸ್ಥಾನ: ಸಿಎಂ ನೀಡಿದ ಸುಳಿವೇನು

Sampriya

ಮಂಗಳವಾರ, 12 ನವೆಂಬರ್ 2024 (18:53 IST)
Photo Courtesy X
ಮೈಸೂರು: ವಾಲ್ಮೀಕಿ ಮಂಡಳಿ ಹಗರಣ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಅಡಿಯಲ್ಲಿ ಹೊರಬಂದಿರುವ ಶಾಸಕ ಬಿ ನಾಗೇಂದ್ರಗೆ ಮತ್ತೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಮುನ್ಸೂಚನೆಯನ್ನು ನೀಡಿದ್ದಾರೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಇಂದು ಸುಮಾರು 443.64 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ನೆರೆದಿದ್ದ ಬೆಂಬಲಿಗರು ಮತ್ತು ನಾಯಕ ಸಮುದಾಯದವರಿಗೆ ಭರವಸೆ ನೀಡಿ ಮಾತನಾಡಿದ ಅವರು, ನಾಗೇಂದ್ರ ಅವರಿಗೆ ಶೀಘ್ರದಲ್ಲೇ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು.

ಹೆಚ್.ಡಿ.ಕೋಟೆ ಶಾಸಕ ಸಿ.ಅನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ನಾಯಕ ಸಮುದಾಯದವರ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಈ ಮಾತುಗಳನ್ನಾಡಿದ್ದಾರೆ. ನಾಯಕ ಸಮುದಾಯದ ಬೆಂಬಲಿಗರು ಎಚ್‌ಡಿ ಕೋಟೆ ಶಾಸಕ ಸಿ ಅನಿಲ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.

ತಮ್ಮ ಆದ್ಯತೆ ನಾಗೇಂದ್ರ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡುವುದಾಗಿದ್ದು, ಮುಂದಿನ ದಿನಗಳಲ್ಲಿ ಅನಿಲ್ ಅವರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ಅವ್ಯವಹಾರ ಸಂಬಂಧ ಸಚಿವ ನಾಗೇಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈಚೆಗೆ ಜಾಮೀನನ ಮೇಲೆ ಬಿಡುಗಡೆಯಾಗಿರುವ ನಾಗೇಂದ್ರ ಅವರಿಗೆ ಉಪಚುನಾವಣೆ ಮುಗಿದ ಬೆನ್ನಲ್ಲೇ ಮತ್ತೇ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ