ಕೆ.ಎಸ್.ಈಶ್ವರಪ್ಪ ವಿರುದ್ಧ ಹೈಕಮಾಂಡ್‌ಗೆ ದೂರು!

ಗುರುವಾರ, 12 ಜನವರಿ 2017 (14:08 IST)
ತೀವ್ರ ವಿರೋಧದ ನಡುವೆಯೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರನ್ನು ಬಿಜೆಪಿ ಪಾಳಯದಿಂದ ಅಮಾನತು ಮಾಡಲಾಗಿತ್ತು. ಬಳಿಕವೂ ಬೆಂಗಳೂರಿನಲ್ಲಿ ನಡೆದ ಬ್ರಿಗೇಡ್‌ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದ ಕುರಿತು ಸಾಕ್ಷಿ ಸಮೇತ ದೂರು ಸಲ್ಲಿಸಿದ್ದಾರೆ. 
 
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನ ಹೊಸ ಸಂಘಟನೆ ಹುಟ್ಟು ಹಾಕುವ ಮೂಲಕ ಪಕ್ಷದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಕೆ.ಎಸ್.ಈಶ್ವರಪ್ಪ ಮುಂದಾಗಿದ್ದರು. ಆದರೆ, ರಾಯಣ್ಣ ಬ್ರಿಗೇಡ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು. 
 
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಕ್ರಿಯ ಕಾರ್ಯಕರ್ತರಾಗುವ ಮೂಲಕ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿ ಆಗಿರುವ ಕೆ.ಎಸ್.ಈಶ್ವರಪ್ಪ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ