ಬೆಂಗಳೂರು: ವಿಪಕ್ಷಗಳಿಗೆ ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನು, ಪಾದಯಾತ್ರೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದರು.
ನಗರದಲ್ಲಿ ಇಂದು ನಡೆದ ಮೈಸೂರು ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಉಪ ಮುಖ್ಯಮಂತ್ರಿ ಶಿವಕುಮಾರರೇ ನಿಮ್ಮ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಡೀ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರವಾಗಿ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆಸಿದ್ದಾರೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ನುಡಿದರು.
ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಹಣವನ್ನು ಬಳಿಕ ಅದನ್ನು ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿದ್ದರು. ಹೆಂಡ ಖರೀದಿಯೂ ಮಾಡಿದ್ದನ್ನು ಇ.ಡಿ. ಉಲ್ಲೇಖಿಸಿದೆ ಎಂದು ಗಮನ ಸೆಳೆದರು.
ಬಿಜೆಪಿ, ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡಾ ಹಗರಣ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ. ಮೂಡಾದಲ್ಲಿ ಸಿದ್ದರಾಮಯ್ಯನವರ ಕುಟುಂಬ ಪಡೆದ 14 ನಿವೇಶನಗಳು ಮೂಡಾಕ್ಕೆ ವಾಪಸ್ ಬಂದು ಬಡವರಿಗೆ ಹಂಚಿಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರರಿಂದ ನಾಲ್ಕು ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳನ್ನು ಮನಸೋ ಇಚ್ಛೆ ಕೊಡಲಾಗಿದೆ. ಸ್ವತಃ ಸಿದ್ದರಾಮಯ್ಯನವರೇ ನೇಮಿಸಿದ ಮೂಡಾ ಅಧ್ಯಕ್ಷ ಮರಿಗೌಡರೇ ಇದನ್ನು ಬಾಯಿ ಬಿಟ್ಟಿದ್ದಾರೆ ಎಂದು ಅವರು ವಿವರಿಸಿದರು. ಇನ್ನು ಮುಂದೆ ನಿವೇಶನ ಹಂಚದಿರಲು ಕಡತದಲ್ಲಿ ಮೂಡಾ ಅಧ್ಯಕ್ಷರೇ ಸೂಚಿಸಿದ್ದರು. ಜಿಲ್ಲಾಧಿಕಾರಿ ತನಿಖೆಯನ್ನೂ ಮಾಡಿಸಿದ್ದರು. ತನಿಖಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ಅದು ಸರಿ ಇರುವುದಾಗಿ ಸರಕಾರವೂ ಹೇಳಿತ್ತು ಎಂದು ತಿಳಿಸಿದರು.
ನಿವೇಶನ ನೀಡದಂತೆ ಸರಕಾರದ ಆದೇಶದ ನಂತರವೂ ಮೂಡಾ ಕಮೀಷನರ್ ಯಥೇಚ್ಛವಾಗಿ ನಿವೇಶನ ಹಂಚಿದ್ದರು ಎಂದು ಆಕ್ಷೇಪಿಸಿದರು. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ನಾವು ಈ ಕುರಿತು ಒತ್ತಡ ಹೇರಿ ಚರ್ಚೆಗೆ ಅವಕಾಶ ಪಡೆದಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಬಿಜೆಪಿ ಸರಕಾರ ಇದ್ದಾಗ ಕೊಟ್ಟಿದ್ದ ಅನುದಾವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ನಡೆದಿದೆ ಎಂದು ಯೂನಿಯನ್ ಬ್ಯಾಂಕ್, ಸಿಬಿಐಗೆ ಪತ್ರ ಬರೆದಿದೆ. ಸಿಬಿಐ ತನಿಖೆ ಮಾಡಬೇಕೆಂದು ಅದು ಕೋರಿತ್ತು ಎಂದು ತಿಳಿಸಿದರು. ಕಾನೂನಿನಡಿಯೇ ಸಿಬಿಐ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸರಕಾರ ರಚಿಸಿದ ಎಸ್‍ಐಟಿ ಎಂದರೆ ಅದು ಸಿದ್ದರಾಮಯ್ಯ ಇನ್‍ವೆಸ್ಟಿಗೇಶನ್ ಟೀಂ ಎಂದು ಅವರು ತಿಳಿಸಿದರು. ಅಹಿಂದ ಸಮುದಾಯಕ್ಕೆ ವಂಚಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷದ ನಾಯಕರ ನೇತೃತ್ವದಲ್ಲಿ ನೆರೆ ಪ್ರದೇಶ ವೀಕ್ಷಣಾ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಇದೇವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯನವರ ಬಾವಮೈದುನವರು 3.16 ಎಕರೆ ಜಮೀನನ್ನು ಅತಿ ಕಡಿಮೆ ಬೆಲೆಗೆ ಪಡೆದಿದ್ದಾರೆ. ಇದೇನಾ ನಿಮ್ಮ ಜನಪರತೆ ಎಂದು ಕೇಳಿದರು. ಮೂಡಾವು ವಶಕ್ಕೆ ಪಡೆದಿದ್ದ ಜಾಗವನ್ನು ಖರೀದಿಸಲಾಗಿತ್ತು ಎಂದು ವಿವರಿಸಿದರು.
ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಾಲ್ಮೀಕಿ ನಿಗಮದ ಹಣ ಅವ್ಯವಹಾರದಿಂದ ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೂಡಾದಲ್ಲೂ ಬಹುದೊಡ್ಡ ಹಗರಣ ಆಗಿದೆ. ಅಲ್ಲದೆ, ಪರಿಶಿಷ್ಟರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡು ಅನ್ಯಾಯ ಮಾಡಿದ್ದಾರೆ ಎಂದು ವಿವರಿಸಿದರು.