ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದ ಬೆಂಗಳೂರು ವೈದ್ಯನಿಗೆ ಮತ್ತೆ ಕೋವಿಡ್ ಸೋಂಕು..!

ಗುರುವಾರ, 9 ಡಿಸೆಂಬರ್ 2021 (19:45 IST)
ಬೆಂಗಳೂರು: ಓಮಿಕ್ರಾನ್ ಸೋಂಕು ಪೀಡಿತರಾಗಿದ್ದ ಬೆಂಗಳೂರು ವೈದ್ಯರಲ್ಲಿ ಮೊದಲ ಪರೀಕ್ಷೆಯ 15 ದಿನಗಳು ಕಳೆದರೂ ಕೋವಿಡ್-19 ಸೋಂಕು ಸಕ್ರಿಯವಾಗಿರುವುದು ಕಂಡುಬರುತ್ತಿದೆ.
ಅಚ್ಚರಿಯೆಂಬಂತೆ ವೈದ್ಯರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಓರ್ವ ವ್ಯಕ್ತಿ ಹಾಗೂ ದ್ವಿತೀಯ ಸಂಪರ್ಕದ ಇಬ್ಬರಲ್ಲಿ ಸೋಂಕು ಪತ್ತೆ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟೀವ್ ತೋರಿಸುತ್ತಿದೆ.
ಒಮಿಕ್ರಾನ್ ಸೋಂಕು ಪತ್ತೆಯಾಗಿ 15 ದಿನಗಳು ಕಳೆದಿದ್ದ ಹಿನ್ನೆಲೆಯಲ್ಲಿ 2 ನೇ ಬಾರಿಯ ಪರೀಕ್ಷೆಯಲ್ಲಿ ನೆಗೆಟೀವ್ ವರದಿಯನ್ನು ಅರಿವಳಿಕೆ ತಜ್ಞರಾಗಿರುವ ವೈದ್ಯರು ನಿರೀಕ್ಷಿಸುತ್ತಿದ್ದರು. ಆದರೆ 2ನೇ ಬಾರಿಯೂ ಕೋವಿಡ್-19 ಸೋಂಕು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಬೋರಿಂಗ್ ಆಸ್ಪತ್ರೆಯಲ್ಲೇ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗಿದೆ.
ವೈದ್ಯರಿಂದ ಸಂಗ್ರಹಿಸಲಾದ ಮಾದರಿಗಳನ್ನು ಮತ್ತೊಮ್ಮೆ ಪರೀಕ್ಷೆಗಾಗಿ 24 ಗಂಟೆಗಳ ನಂತರ ಕಳಿಸಲಾಗುತ್ತದೆ. ಸೋಮವಾರ ನೆಗೆಟೀವ್ ವರದಿ ಪಡೆದಿದ್ದವರನ್ನೂ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ವೈದ್ಯರು ಹಾಗೂ ಅವರ ಸಂಪರ್ಕಿತರು ನೆಗೆಟೀವ್ ವರದಿ ದೃಢಪಡುವವರೆಗೆ ಐಸೊಲೇಷನ್ ಹಾಗೂ ಚಿಕಿತ್ಸೆಯನ್ನು ಮುಂದುವರೆಸಬೇಕಾಗುತ್ತದೆ. ಓಮಿಕ್ರಾನ್ ಪೀಡಿತ ವೈದ್ಯರು ಹಾಗೂ ಅವರ ಸಹೋದ್ಯೋಗಿಗಳಿಗೆ ರಕ್ತದೊತ್ತಡ ಹಾಗೂ ಆಕ್ಸಿಜನ್ ಮಟ್ಟ ಹಾಗೂ ಇತರೆ ಪ್ರಮುಖ ಆರೋಗ್ಯ ಅಂಶಗಳು ಸಹಜವಾಗಿದೆ.
ವೈದ್ಯರಿಗೆ ಮಧುಮೇಹ ಇದ್ದು, ಇನ್ನೂ ಪಾಸಿಟೀವ್ ಬರುತ್ತಿರುವುದಕ್ಕೆ ಇದೂ ಒಂದು ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಡೆಲ್ಟಾ ಹಾಗೂ ಇನ್ನಿತರ ರೂಪಾಂತರಿ ಸೋಂಕು ಪ್ರಕರಣಗಳಲ್ಲಿಯೂ ಈ ರೀತಿ ಆಗಿರುವ ಉದಾಹರಣೆಗಳಿವೆ. ಹಲವರಿಗೆ ಚಿಕಿತ್ಸೆಯ 21 ದಿನಗಳ ನಂತರ ಪಾಸಿಟೀವ್ ಬಂದಿರುವ ಉದಾಹರಣೆಗಳೂ ಇವೆ ಎಂದು ವೈದ್ಯರೊಬ್ಬರು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ