ಬೆಂಗಳೂರು: ಬೆಂಗಳೂರಿನಲ್ಲಿ ಪತಿಯೊಬ್ಬ ಪತ್ನಿಯ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಷ್ಟ್ರದಾದ್ಯಂತ ಸುದ್ದಿ ಮಾಡುತ್ತಿದೆ. ಅತುಲ್ ಸುಭಾಷ್ ಎಂಬ ಟೆಕಿಯ ಧಾರುಣ ಅಂತ್ಯದ ಕತೆ ಎಲ್ಲರ ಕಣ್ತೆರಸಿದೆ.
ಅತುಲ್ ಸುಭಾಷ್ ಇತ್ತೀಚೆಗೆ ತಮ್ಮ ಮಾರತ್ ಹಳ್ಳಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೂಲತಃ ಉತ್ತರ ಪ್ರದೇಶದವರಾದ ಅತುಲ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಸಾವಿಗೆ ಮುನ್ನ ಮಾಡಿಕೊಂಡ ಟೈಮ್ ಟೇಬಲ್, ಡೆತ್ ನೋಟ್ ಎಲ್ಲರ ಗಮನ ಸೆಳೆಯುತ್ತಿದೆ.
ಸಾವಿಗೆ ಮುನ್ನ ಜಸ್ಟಿಸ್ ಈಸ್ ಡ್ಯೂ ಎನ್ನುವ ಬೋರ್ಡ್ ನೇತು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರ ಡೆತ್ ನೋಟ್ ನಲ್ಲಿ ಅವರ ಹೆಂಡತಿ ಮತ್ತು ಮನೆಯವರಿಂದ ಸಿಕ್ಕ ಕಿರುಕುಳದಿಂದಾಗಿ ಈ ಕೃತ್ಯವೆಸಗಿರುವುದಾಗಿ ಹೊರಹಾಕಿದ್ದಾರೆ. 2019 ರಲ್ಲಿ ನಿಖಿತಾ ಸಿಂಘಾನಿಯಾ ಜೊತೆ ಅತುಲ್ ಮದುವೆಯಾಗುತ್ತಾರೆ. ಆಕೆ ಕೂಡಾ ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿ. ಇಬ್ಬರ ನಡುವೆ ವೈಮನಸ್ಯ ಮೂಡುತ್ತದೆ.
ಇದರಿಂದಾಗಿ ಆಕೆ ಉತ್ತರ ಪ್ರದೇಶದ ತನ್ನ ತವರಿಗೆ ಹೋಗುತ್ತಾಳೆ. ಬಳಿಕ ಗಂಡನ ಮೇಲೆ 9 ಕೇಸ್ ಹಾಕಿದ್ದಳು. ವರದಕ್ಷಿಣೆ ಕಿರುಕುಳ, ಕೊಲೆ ಯತ್ನ, ಲೈಂಗಿಕ ಕಿರುಕುಳ ಸೇರಿದಂತೆ ಭಾರತೀಯ ಕಾನೂನಿನಲ್ಲಿ ಗಂಡನ ಮೇಲೆ ಏನೆಲ್ಲಾ ಕೇಸ್ ಹಾಕಬಹುದೋ ಅದೆಲ್ಲವನ್ನೂ ಹಾಕಿ ಕಿರುಕುಳ ನೀಡುತ್ತಾರೆ. ಬಳಿಕ ಮಗನನ್ನೂ ಕರೆದುಕೊಂಡು ತವರಿಗೆ ಹೋಗಿರುತ್ತಾಳೆ. ಅವನನ್ನು ನೋಡಲೂ ಅವಕಾಶ ಕೊಡುವುದಿಲ್ಲ.
ಒಂದು ವೇಳೆ ಮಗನನ್ನು ಭೇಟಿ ಮಾಡಬೇಕೆಂದರೆ ಒಂದು ಭೇಟಿಗೆ 30 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಳು. ಕೇಸ್ ನಿಂದ ಬಿಡುಗಡೆ ಪಡೆಯಲು 3 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಳು. ಎಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕಾನೂನು ಮಹಿಳೆಯರ ಪರವಾಗಿದೆ. ಹೀಗಾಗಿ ಆತನಿಗೆ ಈ ಕೇಸ್ ಗಳಿಂದ ಸಾಕಾಗಿಹೋಗಿತ್ತು. ಇನ್ನು, ನ್ಯಾಯಾಧೀಶರೂ 5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಳಂತೆ.
ಸಾಯುವ ಮುನ್ನ ತನಗೆ ನೀಡಿದ ಕಿರುಕುಳವನ್ನೆಲ್ಲಾ 24 ಪುಟಗಳ ಡೆತ್ ನೋಟ್ ಮತ್ತು 1 ಗಂಟೆಯ ವಿಡಿಯೋ ಮಾಡಿ ಅತುಲ್ ಹೊರಹಾಕಿದ್ದ. ಇನ್ನು ಸಾಯುವ ಎರಡು ದಿನದ ಹಿಂದೆ ಟೈಮ್ ಟೇಬಲ್ ಕೂಡಾ ಹಾಕಿದ್ದ. ಸಾಯುವ ಮೊದಲು ಏನೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ಬರೆದಿಟ್ಟಿದ್ದೂ ಬೆಳಕಿಗೆ ಬಂದಿದೆ.
ಈ ಪ್ರಕರಣ ಈಗ ರಾಷ್ಟ್ರದಾದ್ಯಂತ ಸದ್ದು ಮಾಡುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಹೆಣ್ಣು ಮಕ್ಕಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪುರುಷರಿಗೆ ಕಾಟ ಕೊಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಈಗ ಅತುಲ್ ಗೆ ನ್ಯಾಯ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.