ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟದಿಂದ ನಡೆದ ಗಲಾಟೆ ಬಳಿಕ ನಿನ್ನೆ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅಲ್ಲಿಗೆ ಭೇಟಿ ನೀಡಿದ್ದರು. ಈ ವೇಳೆ ಸೇರಿದ್ದ ಜನಸ್ತೋಮ ನೋಡಿದರೆ ಬಿಜೆಪಿ ತಪ್ಪು ಮಾಡಿತೇ ಎಂದು ನಿಮಗನಿಸಬಹುದು.
ಮದ್ದೂರಿಗೆ ಬಂದಿದ್ದ ಯತ್ನಾಳ್ ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರ ಭಾಷಣಕ್ಕೆ ಶಿಳ್ಳೆ, ಚಪ್ಪಾಳೆಗಳು ಬೀಳುತ್ತಿದ್ದವು. ಜನರ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರೇ ಹರಸಾಹಸ ಪಡುವಂತಾಗಿತ್ತು.
ಯತ್ನಾಳ್ ಬಾಯಿ ಬಿಟ್ಟರೆ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ ಎನ್ನುವುದು ಬಿಟ್ಟರೆ ಅವರೊಬ್ಬ ಚಾರ್ಮ್ ಇರುವ ನಾಯಕ. ಕಟ್ಟಾ ಹಿಂದೂವಾದಿಗಳಿಗೆ ಅವರು ಅದ್ಭುತ ನಾಯಕ. ಇದೀಗ ಮದ್ದೂರಿನಲ್ಲಿ ಯತ್ನಾಳ್ ನೋಡಲು ಬಂದಿದ್ದ ಜನಸಾಗರ ನೋಡಿದರೆ ಬಿಜೆಪಿ ಬೆಂಬಲಿಗರಿಗೂ ಅವರನ್ನು ಉಚ್ಛಾಟನೆ ಮಾಡಿ ತಪ್ಪು ಮಾಡಿದೆವೇನೋ ಎಂದು ಒಂದು ಕ್ಷಣ ಅನಿಸಿರಬಹುದು.
ಆದರೆ ಅವರು ಬಹುಶಃ ಹೈಕಮಾಂಡ್ ಎಚ್ಚರಿಸಿದ ಮೇಲೂ ಮಾತಿಗೆ ಕಡಿವಾಣ ಹಾಕಿದ್ದರೆ ಇಂದಿಗೂ ಬಿಜೆಪಿಯಲ್ಲೇ ಇರುತ್ತಿದ್ದರು. ಆದರೆ ಮಾತು ಮನೆ ಕೆಡಿಸಿತು ಅಂತಾರಲ್ಲ, ಹಾಗೇ ಆಗಿದೆ ಅವರ ಪರಿಸ್ಥಿತಿ.