ಬೆಂಗಳೂರು: ಸರಕಾರವು ಕೂಡಲೇ ಒಳ ಮೀಸಲಾತಿಯ ಗೊಂದಲ ಸರಿಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂಚನೆಯಡಿ ಶೇ 56 ಒಳ ಮೀಸಲಾತಿ ನೀಡುವಂತೆ ನಾವು ಒತ್ತಾಯಿಸುತ್ತೇವೆ. ಇದಕ್ಕೆ ಎಲ್ಲ ರೀತಿಯ ಜನಜಾಗೃತಿಗೆ ನಾವು ಸಿದ್ಧರಿದ್ದೇವೆ. ನಿನ್ನೆ ಮುನಿಯಪ್ಪನವರು 27ರಂದು ವಿಶೇಷ ಸಂಪುಟ ಸಭೆ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಕಾದು ನೋಡುತ್ತೇವೆ. ಇಲ್ಲವಾದರೆ, ಈ ಜನಾಂಗವೇ ಎದ್ದು ನಿಂತು ಹೋರಾಟ ಮಾಡಲಿದೆ. ಈಗಾಗಲೇ ಒಂದು ದೊಡ್ಡ ಹೋರಾಟ ನಿನ್ನೆ ನಡೆದಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ನ್ಯಾಯಬದ್ಧ- ಕಾನೂನುಬದ್ಧ ಶೇ 56 ಒಳ ಮೀಸಲಾತಿ ಇದ್ದು, ಅದು ಶಿಕ್ಷಣ ಕ್ಷೇತ್ರದಲ್ಲಿ 4 ವರ್ಷಗಳಿಂದ ಸಿಗುತ್ತಿದೆ. ಎಂಬಿಬಿಎಸ್, ಎಂಜಿನಿಯರಿಂಗ್ ಮೊದಲಾದವುಗಳಿಗೆ ಅನುಷ್ಠಾನ ಆಗಿದೆ. ಈ ನೇಮಕಾತಿ ವೇಳೆ ಇವರು ಅದನ್ನು ಜಾರಿ ಮಾಡಬೇಕು. ಗಟ್ಟಿಯಾಗಿ ಸರಕಾರಿ ವಕೀಲರು ಇದನ್ನು ಹೇಳಲು ತಯಾರಿಲ್ಲ ಎಂದು ಟೀಕಿಸಿದರು. ಶೇ 56 ಇಟ್ಟುಕೊಂಡು ಮೀಸಲಾತಿ ನೀಡಬೇಕು. ಸುಪ್ರೀಂ ಕೋರ್ಟ್ ಮತ್ತು ನಾಗಮೋಹನ್ ದಾಸ್ ಸಮಿತಿ ಹೇಳಿದ್ದನ್ನು ಪರಿಗಣಿಸಿ ಜಾರಿ ಮಾಡಿ ಎಂದು ಆಗ್ರಹಿಸಿದರು.
ಕೆಲವು ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ಎಸ್‍ಸಿ, ಎಸ್‍ಟಿಯಡಿ ಅತ್ಯಂತ ಕೆಳಗಿರುವ ಅಲೆಮಾರಿ ಸಮುದಾಯವನ್ನು ಬಿಟ್ಟೇ ಬಿಟ್ಟಿದ್ದಾರೆ. ಅವರಿಗೆ ಮನೆ ಇಲ್ಲ; ಊರಿಲ್ಲ; ಮಠ ಇಲ್ಲ; ಕಾಡಿನಲ್ಲೇ ಇರುವವರು. ಅಂಥವರನ್ನೇ ಕೈಬಿಟ್ಟರೆ ಅರ್ಥ ಏನು? ಅವರು ಸಂಘಟಿತರಲ್ಲವೆಂದು ಅನ್ಯಾಯ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಹಿಂದೆ 5 ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿದ್ದರು. ಆ ಸಂದರ್ಭದಲ್ಲಿ ಒಳ ಮೀಸಲಾತಿ ಬೇಕೆಂದು ಆಗ್ರಹಿಸಿ ದೊಡ್ಡ ಹೋರಾಟ ನಡೆದಿತ್ತು. ಎಸ್‍ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ದೊಡ್ಡ ಹೋರಾಟ ನಡೆದಿತ್ತು. ಎಸ್‍ಸಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ದೊಡ್ಡ ಕೂಗು ಕೇಳಿಸಿತ್ತು ಎಂದು ಗಮನಕ್ಕೆ ತಂದರು.
ಹಲವಾರು ಸ್ವಾಮೀಜಿಗಳೂ ಬಹಳ ಒತ್ತಡ ಹಾಕಿದ್ದರು. ಕೆಲವು ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದರು. ಅಹಿಂದ ಸ್ವಯಂಘೋಷಿತ ನಾಯಕರಾದ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಅಹಿಂದ ವರ್ಗಕ್ಕೆ ಅಂದರೆ ಒಬಿಸಿ, ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಯಾವುದೇ ರೀತಿಯ ಅವರ ಬದುಕಿನಲ್ಲಿ ಬದಲಾವಣೆ ತರುವಂಥ ದೀರ್ಘ ಕಾಲದ ಒಂದು ಯೋಜನೆಯನ್ನೂ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಎಸ್‍ಸಿ, ಎಸ್‍ಟಿಗಳಿಗೆ ಇಟ್ಟ ಅನುದಾನವನ್ನು ನೀವು ದೊಡ್ಡ ಪ್ರಮಾಣದಲ್ಲಿ ಅನ್ಯ ಉದ್ದೇಶಕ್ಕೆ ಬಳಸಿದ್ದೀರಿ. ನಿಮಗೇನೂ ಅನಿಸುವುದಿಲ್ಲ. ಇಟ್ಟ ಹಣವನ್ನು ಸಂಪೂರ್ಣ ಖರ್ಚು ಮಾಡುವುದಿಲ್ಲ. ಅದರ ಬಗ್ಗೆ ನಿಮಗೆ ಯಾವುದೇ ಜವಾಬ್ದಾರಿ ಇಲ್ಲ; ಸುಮಾರು 60 ಸಾವಿರ ಕೋಟಿಗಿಂತ ಹೆಚ್ಚು ಹಣ ಎಸ್‍ಸಿ, ಎಸ್‍ಟಿಗೆ ಇಟ್ಟದ್ದು ಅನ್ಯ ಉದ್ದೇಶಕ್ಕೆ ಉಪಯೋಗಿಸಲಾಗಿದೆ. ಇದಕ್ಕಿಂತ ದೊಡ್ಡ ಅನ್ಯಾಯ ಬೇರೆ ಬೇಕಾಗಿಲ್ಲ ಎಂದು ಟೀಕಿಸಿದರು.
ಒಬಿಸಿಗೆ ಇಟ್ಟಂಥ ಕಳೆದ ಬಜೆಟ್‍ನ 441 ಕೋಟಿ ರೂ. ಅನುದಾನದ ಎಲ್ಲ ಮೊತ್ತವನ್ನು ಜನಗಣತಿಗೆ ಕೊಟ್ಟಿದ್ದಾರೆ. ಅದು ಕೇವಲ ಹಿಂದುಳಿದ ವರ್ಗದ ಜಾತಿ ಗಣತಿಯೇ? ಎಲ್ಲ ವರ್ಗದ ಹಿಂದುಳಿಯುವಿಕೆ ಗಣತಿ ಇತ್ತು. ಅದಕ್ಕಾಗಿ ಹಣವನ್ನು ಒಬಿಸಿಯಿಂದ ಯಾಕೆ ಕೊಟ್ಟಿದ್ದೀರಿ? ರಾಜ್ಯದ ಬೊಕ್ಕಸದಿಂದ ಕೊಡಬೇಕಿತ್ತಲ್ಲವೇ ಎಂದು ಕೇಳಿದರು.
ನಿಗಮಗಳಿಗೆ ಬಜೆಟ್‍ನಲ್ಲಿ ಇಟ್ಟ ಹಣವನ್ನು ಖರ್ಚು ಮಾಡಿಲ್ಲ; ಒಂದೇ ಒಂದು ಗಂಗಾ ಕಲ್ಯಾಣ ಕೊಟ್ಟಿಲ್ಲ ಎಂದು ಎಸ್‍ಸಿ, ಎಸ್‍ಟಿ ಶಾಸಕರೇ ದೂರು ಕೊಟ್ಟಿದ್ದಾರೆ. ಈ ಮನೋಧೋರಣೆ ಯಾಕೆ ಎಂದು ಕೇಳಿದ ಅವರು, ಈಗ ಬಂದಿರುವ ಒಳ ಮೀಸಲಾತಿ ಸಂಬಂಧ ಮತ್ತೆ ಗೊಂದಲ ಸೃಷ್ಟಿಸಿದ್ದಾರೆ ಎಂದು ಆಕ್ಷೇಪಿಸಿದರು. ಅವರಿಗೆ ಬದ್ಧತೆ ಇಲ್ಲ; ನಿರ್ಧಾರ ಮಾಡುವ ಸ್ಪಷ್ಟತೆ ಇಲ್ಲ. ಈ ಜನಾಂಗದ ಬಗ್ಗೆ ಕಳಕಳಿ ಇಲ್ಲ ಎಂದು ಟೀಕಿಸಿದರು.
ನಾವು ಮೀಸಲಾತಿ ಪ್ರಮಾಣ ಹೆಚ್ಚಿಸಿದಾಗ ಅದು ಚುನಾವಣಾ ಗಿಮಿಕ್ ಎಂದಿದ್ದರು. ನಾವು ನವೆಂಬರ್‍ನಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೆವು. ಚುನಾವಣೆ ನಡೆದುದು ಏಪ್ರಿಲ್- ಮೇ ತಿಂಗಳಿನಲ್ಲಿ. ನಾವು ಅದನ್ನು ಸಂವಿಧಾನಬದ್ಧವಾಗಿ ಮಾಡಿದ್ದೇವೆ. ಡಾ.ಅಂಬೇಡ್ಕರ್ ಅವರು ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಪ್ರಮಾಣವನ್ನು ಪರಿಗಣಿಸಿ ಮೀಸಲಾತಿ ನೀಡಲು ತಿಳಿಸಿದ್ದರು. 2011ರ ಜನಗಣತಿಗೆ ಅನುಗುಣವಾಗಿ ಜನಸಂಖ್ಯೆಯ ಪ್ರಮಾಣವನ್ನು ಪರಿಗಣಿಸಿ ಮಾಡಲು ಆ ಜನಾಂಗದವರು ಬೇಡಿಕೆ ಇಟ್ಟಿದ್ದರು. ಶ್ರೀರಾಮುಲು ಮತ್ತು ವಿವಿಧ ಜನಾಂಗದವರು ಹೋರಾಟ ಮಾಡಿದ್ದರು. ಆಗ ಅವರೇ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದಾಗಿ ವಿವರಿಸಿದರು.
ನಾಗಮೋಹನ್ ದಾಸ್ ಸಮಿತಿ ವರದಿ ಬಂದ ಬಳಿಕ ಅದನ್ನು ಅನುಷ್ಠಾನ ಮಾಡುವ ಜವಾಬ್ದಾರಿ ನಮ್ಮ ಮೇಲಿತ್ತು. ವರದಿಗೆ ಅನುಗುಣವಾಗಿ, ಸಂವಿಧಾನಬದ್ಧವಾಗಿ ಎಲ್ಲ ಪಕ್ಷಗಳ ಸಭೆಯನ್ನೂ ಕರೆದು ಕಾನೂನು ಮಾಡಿದ್ದೆವು. ಆ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೂ ಭಾಗವಹಿಸಿದ್ದರು. ವಿಧಾನಸಭೆ- ಪರಿಷತ್ತಿನ ಅನುಮೋದನೆ ಪಡೆದ ಕಾನೂನಿಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು. ಒಳಮೀಸಲಾತಿಯನ್ನೂ ಮಾಡಿದ್ದೆವು. ಅದಾದ ಬಳಿಕ ಇವರ ಸರಕಾರ ಬಂದ ಬಳಿಕ ಒಳಮೀಸಲಾತಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ ಎಂದು ಗಮನಕ್ಕೆ ತಂದರು.
ಒಳ ಮೀಸಲಾತಿ ಸಂಬಂಧ ನಮ್ಮ ನಿಲುವನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೆಲವು ಮಾನದಂಡಗಳನ್ನೂ ಅದು ನೀಡಿದೆ. ಇವರಿಗೆ ಒಲ್ಲದ ಮನಸ್ಸು, ಸಮುದಾಯಗಳ ಒತ್ತಡವೂ ಇತ್ತು. ಅದಕ್ಕಾಗಿ ನಾಗಮೋಹನ್ ದಾಸ್ ಅವರ ಮತ್ತೊಂದು ಸಮಿತಿ ರಚಿಸಿದರು. ಅವರು ಸುಪ್ರೀಂ ಕೋರ್ಟ್ ಆದೇಶದಡಿ ಕೆಲವು ನಿರ್ಣಯ ಮಾಡಿದರು. ಅವರ ಶಿಫಾರಸನ್ನೂ ಇವರು ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನೂ ಇವರು ಪಾಲಿಸಿಲ್ಲ. ಯಾವುದನ್ನೂ ಮಾಡದೇ ಕ್ಯಾಬಿನೆಟ್‍ನಲ್ಲಿ ಮೌಖಿಕವಾಗಿ ಕೆಲವು ಮೀಸಲಾತಿ ಮಾಡಿ ಪ್ರಕಟಿಸಿದರು. ಇದು ಕೋರ್ಟಿಗೆ ಹೋಗಲಿದೆ; ನಿಲ್ಲುವುದಿಲ್ಲ ಎಂಬುದು ಅವರಿಗೂ ಗೊತ್ತಿತ್ತು; ಈಗ ಗೊಂದಲದಲ್ಲಿ ಬಿದ್ದಿದ್ದಾರೆ ಎಂದು ದೂರಿದರು.
ಹೈಕೋರ್ಟಿನಲ್ಲಿ ನಿಮ್ಮ ಅಡ್ವೊಕೇಟ್ ಜನರಲ್ ಅವರೇ ಬರೆದು ಕೊಟ್ಟಿದ್ದಾರೆ. ಅಲ್ಲಿ ಆದೇಶ ಇಲ್ಲ. ಒಳ ಮೀಸಲಾತಿ ಸಂಬಂಧ ಕಾನೂನಾಗಿದ್ದು, ಮಾನ್ಯ ರಾಜ್ಯಪಾಲರ ಅಂಕಿತವೂ ಲಭಿಸಿದೆ. ಆದರೆ ಮೀನಾಮೇಷ ಮಾಡುತ್ತಿರುವುದು ಅತ್ಯಂತ ಖಂಡನಾರ್ಹ ಎಂದರು. ಸರಕಾರವು ತನ್ನದೇ ಕಾನೂನನ್ನು ಜಾರಿಗೊಳಿಸಲು ಸಿದ್ಧವಿಲ್ಲ. ಅವರೇ ಮಾಡಿದ ಕಾನೂನನ್ನು ಅವರಿಗೆ ಅನುಷ್ಠಾನ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.
ಅವರ ಸಚಿವಸಂಪುಟದಲ್ಲಿ ಎರಡು ಗುಂಪುಗಳಾಗಿ ಪರ ವಿರೋಧ ಇದೆ. ಒಂದು ಗುಂಪು ಒಳ ಮೀಸಲಾತಿಯೇ ಬೇಡ ಎಂದಿದೆ. ಸಿದ್ದರಾಮಯ್ಯನವರು ಒಳ ಮೀಸಲಾತಿ ವಿರೋಧಿ ಗುಂಪಿನ ಒತ್ತಡಕ್ಕೆ ಮಣಿದಿದ್ದಾರೆ. ಅದಕ್ಕಾಗಿ ಅವರು ಗೊಂದಲ ಸೃಷ್ಟಿಸಿದ್ದಾರೆ. ಮುನಿಯಪ್ಪ ಮತ್ತಿತರ ಕೆಲವು ಸಚಿವರು ಒತ್ತಡ ಹಾಕಿದ್ದರಿಂದ 27ಕ್ಕೆ ವಿಶೇಷ ಸಚಿವಸಂಪುಟ ಸಭೆ ಕರೆದಿದ್ದಾರೆ. ನೀವು 54 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಆದೇಶ ಮಾಡಿದ್ದೀರಿ. ಒಳ ಮೀಸಲಾತಿ ಬಗಗೆ ಸ್ಪಷ್ಟತೆ ಇಲ್ಲ; ಒಲ್ಲದ ಮನಸ್ಸಿನಿಂದ ಮಾಡುವ ಪ್ರಯತ್ನ ಇದೆಂದು ಆಕ್ಷೇಪ ವ್ಯಕ್ತಪಡಿಸಿದರು.