ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರವೂ ಗ್ಯಾರಂಟಿ. ಇದು ರೈತ ಮತ್ತು ಜನವಿರೋಧಿ ಸರ್ಕಾರ ಎಂದು ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಈ ವರ್ಷ ಸರಿಯಾಗಿ ಮಳೆಯಾಗದೇ ಬರದ ವಾತಾವರಣವಿದೆ. ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ 8 ಲಕ್ಷ ಮನೆ, 12 ಲಕ್ಷ ಟಾಯ್ಲೆಟ್ ನಿರ್ಮಿಸಿಕೊಡಲಾಗಿದೆ. ಹಾವೇರಿಯಲ್ಲಿ 13 ಸಾವಿರ ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ನಾವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಮಕ್ಕಳಿಗೆ ರೈತ ನಿಧಿ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ.
ಜನರಿಗಾಗಿ ಪ್ರಧಾನಿ ಮೋದಿ ಏನೆಲ್ಲಾ ಸಾಧ‍್ಯವೋ ಅದೆಲ್ಲವನ್ನೂ ಮಾಡಿದ್ದಾರೆ. ಇದೀಗ ಜನರು ಅವರಿಗೆ ವೋಟ್ ಹಾಕಿ ಅಧಿಕಾರಕ್ಕೆ ತರುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದಿದ್ದಾರೆ.