ಐಟಿ ದಾಳಿ ನಡೆಯುತ್ತೆಂದು ಸಚಿವ ಜಾರಕಿಹೊಳಿಗೆ ಮೊದಲೇ ಗೊತ್ತಿತ್ತಂತೆ!

ಮಂಗಳವಾರ, 24 ಜನವರಿ 2017 (11:31 IST)
ಐಟಿ ಅಧಿಕಾರಿಗಳು ದಾಳಿ ಮಾಡ್ತಾರೆಂದು ಮೊದಲೇ ಗೊತ್ತಿತ್ತು. ಅದರಂತೆ ಈಗ ದಾಳಿ ನಡೆದಿದೆ ಎಂದು ಸಣ್ಣ ಕೈಗಾರಿಕೆ ಖಾತೆ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
 
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಶುಗರ್ ಫ್ಯಾಕ್ಟರಿ ಮೇಲೆ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನನ್ನ ವೈಯಕ್ತಿಕ ಆಸ್ತಿ ಮೇಲೆ ಎಲ್ಲೂ ದಾಳಿಯಾಗಿಲ್ಲ. ಶುಗರ್ ಫ್ಯಾಕ್ಟರಿ ಮೇಲೆ ನಡೆದ ದಾಳಿಯಲ್ಲಿ 43 ಸಾವಿರ ರೂಪಾಯಿ ಹಣ ಪತ್ತೆಯಾಗಿದೆ. ನಾವು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದು ತಿಳಿಸಿದರು.
 
ಐಟಿ ದಾಳಿ ಬಳಿಕ ಸಂಬಂಧಿಸಿದ ಆಸ್ತಿ ವಿವರವನ್ನು ಅಧಿಕಾರಿಗಳು ಬಹಿರಂಗ ಪಡಿಸಬಾರದು. ಆದರೆ, ಐಟಿ ಅಧಿಕಾರಿಗಳು ಆಸ್ತಿ ವಿವರವನ್ನು ಬಹಿರಂಗ ಪಡಿಸಿ, ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
 
ಐಟಿ ದಾಳಿಯ ವೇಳೆ ಯಾವುದೇ ದಾಖಲೆ, ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿಲ್ಲ. ನನ್ನ ತೇಜೊವಧೆಗೆ ಯತ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದೇನೆ ಎಂದು ಸಣ್ಣ ಕೈಗಾರಿಕೆ ಖಾತೆ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
 
ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ 12 ಕೆಜಿ ಚಿನ್ನ ಹಾಗೂ 165 ಕೋಟಿ ರೂಪಾಯಿ ಅಘೋಷಿತ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ