ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಆಲಿಸಲೆಂದು ಬೆಳಗಾವಿಯಲ್ಲಿ ಸದನ ಮಾಡಲಾಗುತ್ತದೆ. ಆದರೆ ಬರೀ ಗಲಾಟೆ, ಆರೋಪ, ಪ್ರತ್ಯಾರೋಪಗಳಲ್ಲೇ ಸದನದ ಕಾಲಾವಧಿ ಮುಗಿದು ಹೋಗುತ್ತಿರುವುದು ವಿಪರ್ಯಾಸ.
ಇಂದಿನಿಂದ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಅದೆಲ್ಲಾ ಕೇವಲ ಮಾತುಗಳಿಷ್ಟೇ ಸೀಮಿತವಾಗಿದೆ ಎಂಬುದು ಇಂದಿನ ಕಲಾಪ ನೋಡಿದರೇ ಸ್ಪಷ್ಟವಾಗುತ್ತಿದೆ.
ಇಂದು ಸದನದ ಆರಂಭದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕೇಳಿ ಬಂದಿರುವ 150 ಕೋಟಿ ರೂ. ಆಮಿಷ ಆರೋಪದ ಬಗ್ಗೆಯೇ ಕೆಸರೆರಚಾಟ ನಡೆದಿದೆ. ಬಿಜೆಪಿ ಶಾಸಕರು ವಿಜಯೇಂದ್ರ ಬೆನ್ನಿಗೆ ನಿಂತರೆ ಇತ್ತ ಸಚಿವ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಮುಂತಾದವರು ವಾಗ್ದಾಳಿ ನಡೆಸುತ್ತಿದ್ದರು. ಈ ಗದ್ದಲದಲ್ಲೇ ಸದಸ್ಯರು ಮುಳುಗಿ ಹೋಗಿದ್ದಾರೆ.
ಕಳೆದ ವಾರವಿಡೀ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಮುಡಾ, ವಕ್ಫ್ ಆಸ್ತಿ ನೋಟಿಫಿಕೇಷನ್ ವಿಚಾರ ಇತ್ಯಾದಿ ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಸದನ ಆರಂಭವಾದರೂ ಅಸಲಿ ಉದ್ದೇಶ ಈಡೇರುತ್ತಿಲ್ಲ. ಈ ಹಿಂದೆ ಬೆಳಗಾವಿ ಅಧಿವೇಶನ ನಡೆದಿದ್ದಾಗಲೂ ಇದೇ ಕತೆಯಾಗಿತ್ತು ಎಂಬುದು ವಿಪರ್ಯಾಸ.