ಬೆಂಗಳೂರು: ನಿನ್ನೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ನಡೆದ ರಸ್ತೆ ಜಗಳಕ್ಕೆ ಸಂಬಂಧಿಸಿದಂತೆ ಡಿಆರ್ ಡಿಒ ಆಫೀಸರ್ ನ ಅರೆಸ್ಟ್ ಮಾಡಿ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ಡಿಆರ್ ಡಿಒ ಆಫೀಸರ್ ಶೀತಲಾದಿತ್ಯ ಬೋಸ್ ಮೊದಲು ಕನ್ನಡ ಮಾತನಾಡಿಲ್ಲ ಎಂದು ತನ್ನ ಮೇಲೆ ಬೈಕ್ ಸವಾರ ಹಲ್ಲೆ ಮಾಡಿದ್ದ ಎಂದು ಆರೋಪಿಸಿದ್ದರು. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು. ಸ್ಥಳೀಯರೂ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು.
ಆದರೆ ಬಳಿಕ ಘಟನೆಯ ಸಿಸಿಟಿವಿ ದೃಶ್ಯ ಹೊರಬರುತ್ತಿದ್ದಂತೇ ಸತ್ಯ ಬಯಲಿಗೆ ಬಂದಿತ್ತು. ಡಿಆರ್ ಡಿಒ ಆಫೀಸರ್ ತಾನೇ ಹಲ್ಲೆ ಮಾಡಿ ಬೈಕ್ ಸವಾರನ ಮೇಲೆ ಆರೋಪಿಸಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಆಫೀಸರ್ ಮೇಲೆ ದೂರು ದಾಖಲಿಸಿಕೊಂಡಿದ್ದರು.
ಆದರೆ ಈಗ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿದರೆ ಸಾಲದು, ಬೆಂಗಳೂರು ಮತ್ತು ಕನ್ನಡಿಗರ ವಿರುದ್ಧ ಸುಳ್ಳು ಆರೋಪ ಮಾಡಿರುವ ಈತನನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.ಭಾರತೀಯ ಸೇನೆಯವರು ಎಂದರೆ ನಮಗೆ ವಿಶೇಷ ಗೌರವವಿದೆ. ಆದರೆ ಈ ವ್ಯಕ್ತಿ ಸುಳ್ಳು ಹೇಳಿ ಸೇನೆಗೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.