ಬೆಂಗಳೂರು: 2008 ರ ಸರಣಿ ಸ್ಪೋಟದ ರೂವಾರಿ ಟಿ ನಾಸಿರ್ ನನ್ನು ಜೈಲಿನಿಂದ ಎಸ್ಕೇಪ್ ಮಾಡಲು ಖತರ್ನಾಕ್ ಪ್ಲ್ಯಾನ್ ರೆಡಿಯಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮೂವರನ್ನು ನಿನ್ನೆ ಬಂಧಿಸಿದ್ದರು.
ಉಗ್ರ ನಾಸಿರ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆತನನ್ನು ಜೈಲಿನಿಂದ ಎಸ್ಕೇಪ್ ಮಾಡಿಸಲು ಜೈಲಿನ ಎಎಸ್ಐ ಚಾಂದ್ ಪಾಷಾ ಸಾಥ್ ನೀಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ನಾಸಿರ್ ಗೆ ಜೈಲಿನಲ್ಲಿ ಜುನೈದ್ ಎಂಬಾತನ ಪರಿಚಯವಾಗಿತ್ತು. ಆತನನ್ನೂ ಭಯೋತ್ಪಾದನೆಗೆ ಸೇರಿಕೊಳ್ಳಲು ಪ್ರೇರೇಪಿಸಿದ್ದ. ಇದೀಗ ಆತನನ್ನೂ ಬಂಧಿಸಲಾಗಿದೆ.
ಸಿನಿಮಾ ರೀತಿಯಲ್ಲಿ ನಾಸಿರ್ ನನ್ನು ಎಸ್ಕೇಪ್ ಮಾಡಿಸಲು ಪ್ಲ್ಯಾನ್ ರೆಡಿಯಾಗಿತ್ತು. ಬಂಧಿತ ಚಾಂದ್ ಪಾಷಾಗೆ ನಾಸಿರ್ ನನ್ನು ಕೋರ್ಟ್ ಗೆ ಕರೆದೊಯ್ಯುವ ಜವಾಬ್ಧಾರಿಯಿತ್ತು. ಕೋರ್ಟ್ ಗೆ ಕರೆದೊಯ್ಯುವಾಗ ನಾಸಿರ್ ಗೆ ತಪ್ಪಿಸಿಕೊಳ್ಳಲು ಚಾಂದ್ ಪಾಷಾ ಪ್ಲ್ಯಾನ್ ರೆಡಿ ಮಾಡಿಕೊಟ್ಟಿದ್ದ. ಮಾರ್ಗ ಮಧ್ಯೆ ಗ್ರೆನೇಡ್ ಸ್ಪೋಟಿಸಿ ಪೊಲೀಸರ ಗಮನ ಬೇರೆಡೆಗೆ ಸೆಳೆದು ನಾಸಿರ್ ನನ್ನು ಎಸ್ಕೇಪ್ ಮಾಡಿಸಲು ಯೋಜನೆ ರೂಪಿಸಲಾಗಿತ್ತು.
ಇದಕ್ಕಾಗಿ ಬಂಧಿತರಲ್ಲಿ ಓರ್ವಳಾಗಿರುವ ಅನೀಸ್ ಫಾತಿಮಾ ವಿದೇಶದಿಂದ ತರಿಸಿಕೊಂಡಿದ್ದ ಗ್ರೇನೇಡ್ ಗಳನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದಳು. ಹೀಗಾಗಿ ಈಕೆಯೇ ಪ್ರಮುಖ ರೂವಾರಿಯಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಫಾತಿಮಾ ಮೂಲಕವೇ ಎಲ್ಲಾ ಮಾಹಿತಿಗಳೂ ಜುನೈದ್ ಗೆ ರವಾನೆಯಾಗುತ್ತಿತ್ತು ಎಂಬ ಅಂಶ ತನಿಖೆಯಿಂದ ಬಯಲಾಗಿದೆ.