ಬಿಡದಿ (ರಾಮನಗರ): ಬ್ರೇಕಪ್ ಬಳಿಕ ದೂರವಾಗಿದ್ದ ಮಾಜಿ ಪ್ರೇಮಿಗೆ ಯುವತಿಯೊಬ್ಬಳು ಚಾಕುವಿನಿಂದ ಇರುದಯ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಪಟ್ಟಣದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಗುರುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ವೇಣುಗೋಪಾಲ್ (27) ಎಂದು ಗುರುತಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿರುವ 30 ವರ್ಷದ ಸುಧಾ ಘಟನೆ ಬಳಿಕ ಬಿಡದಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.
ಪಟ್ಟಣದ ಜಿಮ್‌ನಲ್ಲಿ ಟ್ರೈನರ್ ಆಗಿರುವ ವೇಣುಗೋಪಾಲ್ ಮತ್ತು ಸುಧಾ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಸುಧಾ ಜೊತೆ ವೇಣುಗೋಪಾಲ್ ಅಂತರ ಕಾಯ್ದುಕೊಂಡಿದ್ದರು. ಸುಧಾಳ ಮೊಬೈಲ್ ಕರೆಯನ್ನು ವೇಣುಗೋಪಾಲ್ ಅವರು ಸ್ವೀಕಾರ ಮಾಡುತ್ತಿರಲಿಲ್ಲ.
ಇದರಿಂದ ಬೇಸತ್ತ ಸುಧಾ, ತನಗೆ ಮೋಸ ಮಾಡುತ್ತಿರುವ ಯುವಕನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಮಾತನಾಡಬೇಕಿದೆ ಎಂದು ಗುರುವಾರ ರಾತ್ರಿ ಯುವಕನನ್ನು ತನ್ನ ಮನೆ ಬಳಿಗೆ ಕರೆಯಿಸಿಕೊಂಡು ಚಾಕುವಿನಿಂದ ಹೊಟ್ಟೆ, ಎದೆ ಹಾಗೂ ಭುಜಕ್ಕೆ ಇರಿದಿದ್ದಾಳೆ. ನೋವಿನಿಂದ ಯುವಕ ಕೆಳಕ್ಕೆ ಬೀಳುತ್ತಿದ್ದಂತೆ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.
ಚಾಕು ಇರಿತ ತೀವ್ರತೆಗೆ ಯುವಕನ ಕರಳು ಹೊರಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯದ ಬಳಿಕ ಯುವತಿ ಠಾಣೆಗೆ ಬಂದು ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.