ಅಖಾಡಕ್ಕಿಳಿಯಲು ಸಿದ್ಧವಾದ ಕೋಣಗಳು: ಬೆಂಗಳೂರಿನಲ್ಲಿ ಕಂಬಳ ನೋಡಲು ರೆಡಿನಾ?

ಶುಕ್ರವಾರ, 24 ನವೆಂಬರ್ 2023 (10:40 IST)
Photo Courtesy: Twitter
ಬೆಂಗಳೂರು: ಕರಾವಳಿಯಲ್ಲಿ ಜನಪ್ರಿಯವಾಗಿರುವ ಗ್ರಾಮೀಣ ಕ್ರೀಡೆ, ಕಲೆ ಕಂಬಳ ಇದೀಗ ಬೆಂಗಳೂರಿಗೆ ಬಂದಿದೆ. ಬೆಂಗಳೂರು ಕಂಬಳ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿಯ ವೈಭೋಗ ವೀಕ್ಷಿಸಬಹುದು.

ನಿನ್ನೆ ಕಂಬಳ ಕೋಣಗಳು ಮಂಗಳೂರು ಭಾಗದಿಂದ ಬೆಂಗಳೂರಿಗೆ ಬಂದಿದ್ದು, ಕುದಿ ಕಂಬಳಕ್ಕೆ ನಿನ್ನೆಯೇ ಚಾಲನೆ ನೀಡಲಾಗಿದೆ. ನಾಳೆ ಮತ್ತು ನಾಡಿದ್ದು ಅಧಿಕೃತವಾಗಿ ಕಂಬಳ ಉತ್ಸವ ನಡೆಯಲಿದೆ. ನಾಳೆ ಬೆಳಿಗ್ಗೆ 10.30 ಕ್ಕೆ ಕಂಬಳ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಅದಾದ ಬಳಿಕ ಸಂಜೆ ನಿಜವಾದ ಕಂಬಳ ಓಟ ವೀಕ್ಷಿಸಬಹುದು. ಏಕಕಾಲಕ್ಕೆ 7 ಸಾವಿರ ಮಂದಿ ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.  

ಶನಿವಾರ ಸಂಜೆ 5.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಅರ್ಜುನ್ ಜನ್ಯಾ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮಗಳಿವೆ. ಅವರಲ್ಲದೆ, ಸ್ಯಾಂಡಲ್ ವುಡ್ ನ ಘಟಾನುಘಟಿ ಕಲಾವಿದರು, ಕರಾವಳಿ ಮೂಲಕ ನಟಿಯರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಮುಂತಾದವರು ಭಾಗಿಯಾಗುವ ನಿರೀಕ್ಷೆಯಿದೆ.

ನಾಳೆ ಮಧ್ಯರಾತ್ರಿಯವರೆಗೂ ಕಂಬಳ ನೋಡಬಹುದು. ಭಾನುವಾರವೂ ಕಂಬಳ ವೀಕ್ಷಿಸುವ ಯೋಗವಿದೆ. ಬೆಂಗಳೂರು ಕಂಬಳಕ್ಕೆ ಸುಮಾರು 7-8 ಲಕ್ಷ ಮಂದಿ ಆಗಮಿಸುವ ಸಾಧ‍್ಯತೆಯಿದೆ. ಕಂಬಳದ ಜೊತೆಗೆ ಕರಾವಳಿಯ ತಿಂಡಿ, ಸಾಂಸ್ಕೃತಿಕತೆ ಸವಿಯುವ ಯೋಗ ನಿಮ್ಮದಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ