ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಸಿಡಿಲು, ಮಿಂಚಿನ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಮುಂಗಾರು ಪೂರ್ವ ಮಳೆ ಬೆಂಗಳೂರಿನಲ್ಲಿ ನಿನ್ನೆಯೂ ಮುಂದುವರಿದಿದೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ನಿನ್ನೆ ತಡರಾತ್ರಿ ಮಳೆಗಿಂತ ಗುಡುಗು-ಮಿಂಚಿನ ಅಬ್ಬರವೇ ಹೆಚ್ಚಾಗಿತ್ತು. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ರಾಜರಾಜೇಶ್ವರಿ ನಗರದಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಉಳಿದಂತೆ ಹಲವೆಡೆ ಸಿಡಿಲು ಮತ್ತು ಗಾಳಿಯ ಅಬ್ಬರ ಜೋರಾಗಿತ್ತು. ಮುಂಗಾರು ಪೂರ್ವ ಬಂದಿರುವ ಈ ಚಿಕ್ಕ ಮಳೆಗೇ ಕೆಲವೆಡೆ ಮನೆಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ, ನಿನ್ನೆ ರಾಜ್ಯದ ಬಹುತೇಕ ಕಡೆ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಕೋಲಾರ ಸೇರಿದಂತೆ ಬಹುತೇಕ ಕಡೆ ನಿನ್ನೆ ಮಳೆಯಾಗಿದೆ. ಬಿರು ಬೇಸಿಗೆಯಿಂದ ತತ್ತರಿಸಿದ್ದ ಜನಕ್ಕೆ ಈ ಮಳೆ ಸಮಾಧಾನ ನೀಡಿದೆ.
ಇಂದು ಬೆಂಗಳೂರಿನಲ್ಲಿ ಹಗಲು ಮಳೆಯ ಸೂಚನೆ ಇಲ್ಲದಿದ್ದರೂ ರಾತ್ರಿ ಮಳೆಯಾಗುವ ಸಂಭವವಿದೆ. ಇನ್ನೂ ನಾಲ್ಕು ದಿನ ಮಳೆಯಾಗುವ ಸೂಚನೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಗುರುವಾರದಿಂದ ವೀಕೆಂಡ್ ಪೂರ್ತಿ ಮಳೆಯಾಗುವ ಸೂಚನೆ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ತಾಪಮಾನ ಕರ್ನಾಟಕದಾದ್ಯಂತ ಸರಾಸರಿ 35 ಡಿಗ್ರಿ ದಾಟಿತ್ತು. ಆದರೆ ಈಗ 31-30 ಕ್ಕೆ ಬಂದಿಳಿದಿದೆ.