Bengaluru Water Crisis: ಅಪಾರ್ಟ್ ಮೆಂಟ್ ಗಳಲ್ಲಿ ಟಿಶ್ಯೂ, ಆಸ್ಪತ್ರೆಗಳಲ್ಲೂ ನೀರಿಲ್ಲ

Krishnaveni K

ಮಂಗಳವಾರ, 19 ಮಾರ್ಚ್ 2024 (13:06 IST)
ಬೆಂಗಳೂರು: ಬೆಂಗಳೂರಿನ ಜಲಕ್ಷಾಮ ತೀವ್ರಗೊಂಡಿದ್ದು, ಅಪಾರ್ಟ್ ಮೆಂಟ್ ಗಳಲ್ಲಿ ನೀರು ಪೂರೈಕೆ ಮಾಡಲಾಗದೇ ಟಾಯ್ಲೆಟ್ ಪೇಪರ್ ಗಳನ್ನು ಬಳಕೆ ಮಾಡುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಆಸ್ಪತ್ರೆಗಳಲ್ಲೂ ನೀರಿಲ್ಲದೇ ರೋಗಿಗಳು ಪರದಾಡುವಂತಾಗಿದೆ.

ಬೆಂಗಳೂರಿನ ಜನ ಬಹುತೇಕ ಕಡೆ ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಿರುವುದರಿಂದ ಅದೂ ಸಿಗುವುದು ಕಷ್ಟವಾಗುತ್ತಿದೆ. ಅಗತ್ಯಕ್ಕೆ ಬೇಕಾದಷ್ಟು ನೀರು ಸಿಗದೇ ಜನ ದುಬಾರಿ ಹಣ ಖರ್ಚು ಮಾಡಿಯಾದರೂ ಟ್ಯಾಂಕರ್ ತರಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ಕೆಲವು ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಶೌಚಾಲಯ ಬಳಕೆಗೂ ನೀರಿಲ್ಲದೇ ವಿದೇಶೀಯರಂತೇ ಟಾಯ್ಲೆಟ್ ಪೇಪರ್ ಬಳಕೆ ಮಾಡಲಾಗುತ್ತಿದೆ. ಬೇಸಿಗೆಯ ಉರಿಬಿಸಿಲು ಹೆಚ್ಚಾಗುತ್ತಿದ್ದು, ನೀರಿಲ್ಲದೇ ಟಾಯ್ಲೆಟ್ ಪೇಪರ್ ಬಳಸುವ ಅನಿವಾರ್ಯ ಸ್ಥಿತಿಗೆ ಜನರು ತಲುಪಿದ್ದಾರೆ.

ಅಷ್ಟೇ ಅಲ್ಲ, ಆಸ್ಪತ್ರೆಗಳಲ್ಲೂ ನೀರಿಗೆ ಹಾಹಾಕಾರವಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸರ್ಕಾರಕ್ಕೆ ನೀರು ಪೂರೈಸುವಂತೆ ಮೊರೆ ಹೋಗಿದೆ. ನೀರಿಲ್ಲದೇ ರೋಗಿಗಳನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಎಂಬುದು ಆಸ್ಪತ್ರೆಗಳ ಅಳಲು.

ಶಾಲೆಗಳಲ್ಲೂ ಇದೇ ಪರಿಸ್ಥಿತಿಯಾಗಿದೆ. ಇದೀಗ ವರ್ಷದ ಅಂತ್ಯವಾಗುತ್ತಿದ್ದರೂ ಈ ತಿಂಗಳಿಡೀ ನಿಭಾಯಿಸಲೇಬೇಕಾಗಿದೆ. ಅತ್ತ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಅಗತ್ಯಕ್ಕೆ ನೀರು ಪೂರೈಸಲಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಖಾಸಗಿ ವ್ಯಾಟರ್ ಕ್ಯಾನ್ ಗಳ ಮೊರೆ ಹೋಗಬೇಕಾಗಿಬಂದಿದೆ. ಸರ್ಕಾರ ತಕ್ಷಣವೇ ಇಂತಹ ಅಗತ್ಯ ಸ್ಥಳಗಳಿಗೆ ನೀರು ಪೂರೈಸುವ ಕೆಲಸ ಮಾಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ