ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಅಸಮಾಧಾನಿತರಾಗಿರುವ ಸುಮಲತಾ ಅಂಬರೀಶ್ ಗೆ ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸಲು ಬುಲಾವ್ ನೀಡಿದೆ.
ಮಂಡ್ಯ ಲೋಕಸಭೆ ಟಿಕೆಟ್ ನ್ನು ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಆದರೆ ಇದು ಸುಮಲತಾ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅವರ ಜೊತೆ ಮಾತುಕತೆ ನಡೆಸಲು ಬಿಜೆಪಿ ಹೈಕಮಾಂಡ್ ದೆಹಲಿಗೆ ಬರಲು ಸೂಚಿಸಿದೆ. ಕೇವಲ ಮಾತುಕತೆ ನಡೆಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಸಲಹೆ ನೀಡುತ್ತದೆಯೇ ಅಥವಾ ಬೇರೊಂದು ಕ್ಷೇತ್ರದ ಆಫರ್ ನೀಡಲಿದೆಯಾ ಗೊತ್ತಿಲ್ಲ.
ಆದರೆ ಸುಮಲತಾಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮನಸ್ಸಿಲ್ಲ. ಹೀಗಾಗಿ ಸ್ವತಃ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೇ ಮಾತುಕತೆ ನಡೆಸಲಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಸುಮಲತಾ ಮುಂದಿನ ನಡೆಯೇನು ನೋಡಬೇಕು.
ಮಂಡ್ಯ ಕ್ಷೇತ್ರದಿಂದ ಈಗ ಜೆಡಿಎಸ್ ನ ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಅತ್ತ ಕುಮಾರಸ್ವಾಮಿಯೇ ಸ್ವತಃ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ. ಹೀಗಾಗಿ ಮಂಡ್ಯ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಇನ್ನೂ ಮುಂದುವರಿದಿದೆ.