ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ವಂಚನೆ!

ಮಂಗಳವಾರ, 20 ಸೆಪ್ಟಂಬರ್ 2016 (10:03 IST)
ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಮಹಿಳೆಯೊಬ್ಬಳು 7 ಜನರನ್ನು ಮದುವೆಯಾಗಿ ಮೋಸ ಮಾಡಿರುವ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 
 
ಯಾಸ್ಮಿನ್ ಬಾನು ಎಂಬ ಮಹಿಳೆ 7 ಜನರಿಗೆ ಮೋಸ ಮಾಡಿದ್ದು, ಈಕೆ ಮದುವೆಯಾದವರಿಂದ ಹಣ ಲಪಟಾಯಿಸಿ ಪರಾರಿಯಾಗುತ್ತಿದ್ದಳು. ಈ ಕುರಿತು ಈಕೆಯ ನಾಲ್ಕನೇ ಗಂಡ ಅಫ್ಜಲ್ ಬೆಂಗಳೂರಿನ ಕೆ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. 
 
ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಯಾಸ್ಮಿನ್ ಬಾನುಗೆ ಆಕೆಯ ತಾಯಿ ಹಾಗೂ ಸಹೋದರರ ಕುಮ್ಮಕ್ಕು ಇದೆ ಎಂದು ಅಫ್ಜಲ್ ಆರೋಪಿಸಿದ್ದಾರೆ. 
 
ಅಫ್ಜಲ್‌ಗೂ ಕೂಡ ಈ ಮೊದಲೇ ಮದುವೆಯಾಗಿತ್ತು. ಅಫ್ಜಲ್ ಕಚೇರಿಯಲ್ಲಿ ಯಾಸ್ಮಿನ್ ಬಾನು ಕೆಲಸ ಮಾಡುತ್ತಿದ್ದಳು. ತನ್ನನ್ನು ಮದುವೆಯಾಗು ಇಲ್ಲವಾದ್ರೆ, ನಿನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ ಎಂದು ಧಮ್ಕಿ ಹಾಕಿ ಅಫ್ಜಲ್‌ನನ್ನು ವಿವಾಹವಾಗಿದ್ದಳು ಎಂದು ಹೇಳಲಾಗುತ್ತಿದೆ. 
 
ಯಾಸ್ಮಿನ್ ಬಾನುನಿಂದ ವಂಚಿತರಾದವರು ಮರ್ಯಾದೆಗೆ ಹೆದರಿ ದೂರು ನೀಡಲು ಹಿಂಜರಿದಿದ್ದರು. ಈಗ ಅಫ್ಜಲ್ ದೂರು ನೀಡಿರುವ ಬೆನ್ನೆಲ್ಲೇ ಉಳಿದ ಆರು ವಂಚಿತರು ಸಹ ದೂರು ದಾಖಲಿಸಲು ಮುಂದಾಗಿದ್ದಾರೆ. 
 
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆ.ಜೆ.ಹಳ್ಳಿ ಪೊಲೀಸರು ಯಾಸ್ಮಿನ್ ಬಾನುಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ