ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ
ಆಷಾಢ ಮಾಸದ ಕೊನೆಯ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಕೊನೆಯ ಆಷಾಢ ಶುಕ್ರವಾರವಾದ ಕಾರಣ ನಾಡ ಅದಿದೇವತೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಾಡ ಅದಿದೇವತೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯದ ಆವರಣವನ್ನೂ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿದೆ. ಮುಂಜಾನೆ 3 ಗಂಟೆಯಿಂದಲೇ ರಾಜ್ಯದ ನಾನಾ ಕಡೆಗಳಿಂದ ಆಗಮಿಸುತ್ತಿರುವ ಭಕ್ತರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆಷಾಢ ಮಾಸದ ಕೊನೆ ಶುಕ್ರವಾರವಾದ ಇಂದು ಬೆಳಗ್ಗೆ 5:30 ರಿಂದ ಭಕ್ತರಿಗೆ ಚಾಮುಂಡಿ ತಾಯಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಚಾಮುಂಡಿ ತಾಯಿಗೆ ಮುಂಜಾನೆಯೇ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಂತರ ಮಹಾಮಂಗಳಾರತಿ ಮಾಡಲಾಗಿದೆ. ಬೆಳಗ್ಗೆ 5:30 ರಿಂದ ರಾತ್ರಿ 11 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.