ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗೆ ಭಾರತ ರತ್ನ ನೀಡಿ; ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಮನವಿ

ಮಂಗಳವಾರ, 4 ಜೂನ್ 2019 (07:16 IST)
ಬೆಂಗಳೂರು : ನಡೆದಾಡುವ ದೇವರೆಂದೇ ಪ್ರಸಿದ್ಧರಾದ ತುಮಕೂರು ಸಿದ್ದಗಂಗಾ ಮಠದ  ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು,ಇದೀಗ  ಮರಣೋತ್ತರ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಸಿಎಂ ಕುಮಾರಸ್ವಾಮಿ ಪತ್ರದ ಮೂಲಕ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.




ಐತಿಹಾಸಿಕ ಹಿನ್ನೆಲೆಯನ್ನ ಹೊಂದಿರುವ ತುಮಕೂರು ಸಿದ್ದಗಂಗಾ ಮಠ ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. 1941ರಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನ ಸ್ವೀಕಾರ ಮಾಡಿದ್ದರು. ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ ಸ್ಥಾಪಿಸಿ ದೇಶದ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದು ಬಡ ಜನರಿಗೆ ಶಿಕ್ಷಣ ಸೇವೆಯನ್ನು ನೀಡಿದ್ದಾರೆ ಎಂದು ಪತ್ರದ ಮೂಲಕ ಸ್ವಾಮೀಜಿಗಳ ಕುರಿತು ಸವಿವರವಾಗಿ ತಿಳಿಸಿದ್ದಾರೆ.


ಅಲ್ಲದೇ ಏಳು ದಶಕಗಳ ಕಾಲ ಶಿವಕುಮಾರಸ್ವಾಮೀಜಿಗಳು ತ್ರಿವಿಧ ದಾಸೋಹಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಸಮಾಜಕ್ಕೆ ಲೋಕೋಪಕಾರ, ಶಿಕ್ಷಣ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಜನರಿಗೆ ಸ್ವಾಮೀಜಿಗಳು ನೀಡಿರುವ ಸೇವೆಯಿಂದ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಆದ್ದರಿಂದ ಸ್ವಾಮೀಜಿಗಳಿಗೆ ಮರಣೋತ್ತರ ಭಾರತ ಪ್ರಶಸ್ತಿಗೆ ಪರಿಗಣಿಸ ಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ