ಬೆಂಗಳೂರು: ಮಗ ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ ಮೂಲಕ ಪ್ರತ್ಯಕ್ಷರಾದ ಬೆನ್ನಲ್ಲೇ ತಾಯಿ ಭವಾನಿ ರೇವಣ್ಣಗೆ ಸಂಕಷ್ಟ ಶುರುವಾಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಿಂದ ವಿಡಿಯೋ ಸಂದೇಶ ನೀಡಿದ್ದು, ಶುಕ್ರವಾರ ತಾಯ್ನಾಡಿಗೆ ಮರಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ತನ್ನ ಮೇಲೆ ನಡೆಸಿರುವ ಆರೋಪಗಳೆಲ್ಲಾ ರಾಜಕೀಯ ಪಿತೂರಿ ಎಂದಿದ್ದಾರೆ.
ಅದೇನೇ ಇದ್ದರೂ ಅತ್ಯಾಚಾರ ಪ್ರಕರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೇ ವಿಮಾನ ನಿಲ್ದಾಣದಿಂದಲೇ ಅವರನ್ನು ಬಂಧಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಈ ನಡುವೆ ಭವಾನಿ ರೇವಣ್ಣ ಕೂಡಾ ಮಹಿಳೆಯ ಅಪಹರಣ ಕೃತ್ಯದಲ್ಲಿ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇದುವರೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದರೂ ಅವರು ಆರೋಗ್ಯದ ನೆಪ ಹೇಳಿ ತಪ್ಪಿಸಿಕೊಂಡಿದ್ದರು. ಆದರೆ ಈಗ ಪುತ್ರನ ಜೊತೆಗೆ ಅವರಿಗೂ ಬಂಧನದ ಭೀತಿ ಎದುರಾಗಿದೆ. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಇಂದು ನಿರೀಕ್ಷಣಾ ಜಾಮೀನು ಸಿಕ್ಕರೆ ಭವಾನಿ ರೇವಣ್ಣ ಎಸ್ಕೇಪ್ ಆಗಬಹುದು. ಇಲ್ಲದೇ ಹೋದರೆ ಮಗನ ಜೊತೆಗೆ ಅವರಿಗೂ ಕಂಬಿ ಭಾಗ್ಯ ಸಿಗಲಿದೆ.