ಬೆಂಗಳೂರು: ಮಳೆಗಾಲದಲ್ಲಿ ರಸ್ತೆ ಗುಂಡಿ ಬೀಳುವುದು ಸಹಜ. ಅದಕ್ಕೆಲ್ಲಾ ಬೆಂಗಳೂರನ್ನು ಬೇರೆಯವರ ಮುಂದೆ ನಗೆಪಾಟಲಿಗೀಡು ಮಾಡಬೇಡಿ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ರಸ್ತೆ ಗುಂಡಿಗಳ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಯಾಗುತ್ತಿಲ್ಲ ಎಂಬ ವಿಚಾರವನ್ನಿಟ್ಟುಕೊಂಡು ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವುದರ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಮಳೆಗಾಲದಲ್ಲಿ ರಸ್ತೆ ಗುಂಡಿಯಾಗುವುದು ಸಹಜ ಎಂದಿದ್ದಾರೆ.
ನಾವೇ ಬೆಂಗಳೂರನ್ನು ಅವಹೇಳನ ಮಾಡಬಾರದು. ಬ್ರ್ಯಾಂಡ್ ಬೆಂಗಳೂರು ಅಲ್ಲ, ಗುಂಡಿ ಬೆಂಗಳೂರು ಎಂದು ಅವಹೇಳನ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಹೊರಗಿನವರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ? ನಮ್ಮನ್ನು ನಾವೇ ಲೇವಡಿ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಎಲ್ಲರ ಕಾಲದಲ್ಲೂ ರಸ್ತೆ ಗುಂಡಿಗಳಾಗಿವೆ. ಬಿಜೆಪಿ ಕಾಲದಲ್ಲೂ ರಸ್ತೆ ಗುಂಡಿಗಳಿತ್ತು. ಮಳೆಗಾಲದಲ್ಲಿ ಇದು ಸಹಜ. ಹಾಗಂತ ಇದನ್ನೇ ದೊಡ್ಡ ವಿಚಾರ ಮಾಡಬೇಡಿ ಎಂದಿದ್ದಾರೆ. ಮಳೆಗಾಲದಲ್ಲಿ ರಸ್ತೆ ಗುಂಡಿ, ಚರಂಡಿ ಅವ್ಯವಸ್ಥೆ ಇಂತಹ ಸಮಸ್ಯೆಗಳು ಇರುತ್ತವೆ. ಅದೆಲ್ಲಾ ದೊಡ್ಡ ವಿಚಾರವಲ್ಲ. ಸರಿಪಡಿಸಿಕೊಂಡು ಹೋಗಬೇಕು ಎಂದಿದ್ದಾರೆ.