ಬೆಂಗಳೂರು: ಜಿಆರ್ ಫಾರ್ಮ್ ಹೌಸ್ ನಲ್ಲಿ ಮೊನ್ನೆಯಷ್ಟೇ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಇಬ್ಬರು ಶಾಸಕರ ಆಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಾಸಕ ಗೋವರ್ಧನ ರೆಡ್ಡಿ ಮತ್ತು ಶ್ರೀಕಾಂತ್ ರೆಡ್ಡಿ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರೇವ್ ಪಾರ್ಟಿ ನಡೆದ ಸ್ಥಳದಲ್ಲಿ ಕಾರೊಂದು ಪತ್ತೆಯಾಗಿತ್ತು. ಇದರಲ್ಲಿ ಶಾಸಕರ ಪಾಸ್ ಇತ್ತು. ಈ ಅನುಮಾನದ ಜಾಡು ಹಿಡಿದ ಪೊಲೀಸರು ಈಗ ಶಾಸಕರ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ರೇವ್ ಪಾರ್ಟಿ ಸಂಬಂಧ ಶಾಸಕ ಗೋವರ್ಧನ ರೆಡ್ಡಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಟಿಡಿಪಿ ಆರೋಪಿಸಿದೆ. ಈ ಸಂಬಂಧ ಗೋವರ್ಧನ ರೆಡ್ಡಿ ರಕ್ತದ ಮಾದರಿ ಪರೀಕ್ಷೆಗೆ ನೀಡಲಿ ಎಂದು ಸವಾಲು ಹಾಕಿದೆ. ಆದರೆ ರೇವ್ ಪಾರ್ಟಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಗೋವರ್ಧನ ರೆಡ್ಡಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಬೆಂಗಳೂರು ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಈಗಾಗಲೇ ನಟಿ ಹೇಮಾ, ಆಶಿ ರಾಯ್ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬಂದಿವೆ. ಹೇಮ, ಆಶಿ ರಾಯ್ ಸೇರಿದಂತೆ 83 ಮಂದಿಯ ರಕ್ತದ ಮಾದರಿ ಪರೀಕ್ಷಿಸಿದಾಗ ಪಾಸಿಟಿವ್ ರಿಪೋರ್ಟ್ ಬಂದಿತ್ತು. ಇದರ ನಡುವೆ ಪಾರ್ಟಿ ಆಯೋಜಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.