ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕನ್ನ ಹಾಕಿದ ಭೂಪರು

ಶನಿವಾರ, 9 ಮಾರ್ಚ್ 2019 (16:27 IST)
ಮುಖ್ಯಮಂತ್ರಿಗಳ ಜತಾ ದರ್ಶನದಲ್ಲಿ ನಕಲಿ ವೈದ್ಯಕೀಯ ದಾಖಲೆ ನೀಡಿ ನೆರವಿಗಾಗಿ ಅರ್ಜಿ ಸಲ್ಲಿಸಿದ ಇಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಫೆಬ್ರುವರಿ 20 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನದಲ್ಲಿ  ಚನ್ನಪ್ಪ ಹಾಗೂ ಸುನಂದಮ್ಮ ಎಂಬವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸುವಂತೆ ಮನವಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕಚೇರಿ ಸಿಬ್ಬಂದಿ ಪರಿಶೀಲಿಸಿದಾಗ ಅರ್ಜಿಯೊಂದಿಗೆ ಲಗತ್ತಿಸಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳು ಮೇಲ್ನೋಟಕ್ಕೇ ನಕಲಿ ಎಂದು ಕಂಡು ಬಂದ ಕಾರಣ, ದಾಖಲೆಗಳ ನೈಜತೆ ಪರಿಶೀಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಲ್ಲದೆ, ಶಾಖೆಯ ಇಬ್ಬರು ಸಿಬ್ಬಂದಿಯ ತಂಡ ರಚಿಸಿ, ವರದಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಸಿಬ್ಬಂದಿ ಫೆಬ್ರುವರಿ 26 ರಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ದಾಖಲೆಗಳು ನಕಲಿ ಎಂದು ಆಸ್ಪತ್ರೆಯ ಅಧಿಕಾರಿಗಳು ದೃಢೀಕರಿಸಿದ್ದರು. 
ಅಲ್ಲದೆ, ಈ ದಾಖಲೆಗಳಲ್ಲಿ ಸೂಚಿಸಲಾಗಿರುವ ಹೆಸರುಗಳೂ ಮತ್ತು ಆಸ್ಪತ್ರೆಯ ನೋಂದಣಿ ಸಂಖ್ಯೆಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಬಿಲ್ಲುಗಳಲ್ಲಿ ನಮೂದಿಸಲಾಗಿರುವ ಹೆಸರಿನ ವೈದ್ಯರು ಯಾರೂ ಅಲ್ಲಿ ಸೇವೆ ಸಲ್ಲಿಸುತ್ತಿಲ್ಲ ಎಂದು ಆಸ್ಪತ್ರೆಯು ತನ್ನ ಪತ್ರದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರು ಹಾಗೂ ಮುಖ್ಯ ಕಾರ್ಯದರ್ಶಿಗಳ ಸೂಚನೆಯ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ