ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್‌: 14 ವರ್ಷಗಳ ವನವಾಸದ ನಂತರ ಬಳ್ಳಾರಿ ಪ್ರವೇಶಕ್ಕೆ ಅನುಮತಿ

Sampriya

ಸೋಮವಾರ, 30 ಸೆಪ್ಟಂಬರ್ 2024 (14:38 IST)
Photo Courtesy X
ಬಳ್ಳಾರಿ: ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್​ನಲ್ಲಿ ಬಿಗ್ ರಿಲೀಫ್ ದೊರೆತಿದೆ. 14 ವರ್ಷಗಳ ಬಳಿಕ ಬಳ್ಳಾರಿಗೆ ತೆರಳಲು ಅವರಿಗೆ ಅನುಮತಿ ಸಿಕ್ಕಿದೆ.

ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಕಳೆದ ಒಂದೂವರೆ ದಶಕಗಳಿಂದ ತವರು ಜಿಲ್ಲೆಯ ಪ್ರವೇಶವಿಲ್ಲದೆ ವನವಾಸ ಅನುಭವಿಸಿದ್ದ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಕೊನೆಗೂ ಅನುಮತಿ ನೀಡಿದೆ. ಇದರೊಂದಿಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ದೊರೆತಂತಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬೆಂಗಳೂರಿನ ಪಾರಿಜಾತ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದರು.

ಜನಾರ್ದನ ರೆಡ್ಡಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ಹಾಕಿದ್ದ ಷರತ್ತುಗಳನ್ನು ಸಡಿಲಿಸಿದೆ. ಆದ್ದರಿಂದ ಅವರು ಇನ್ನು ಮುಂದೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಬಹುದು. ಅಲ್ಲಿರುವ ತಮ್ಮ ಐಷಾರಾಮಿ ನಿವಾಸದಲ್ಲಿ ವಾಸ್ತವ್ಯವನ್ನು ಹೂಡಬಹುದು.

ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು. ವಿವಾಹದ ಕಾರಣ 10ಕ್ಕೂ ಹೆಚ್ಚು ದಿನಗಳ ಕಾಲ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಕೋರ್ಟ್ ಅನುಮತಿ ನೀಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ