ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ

Sampriya

ಭಾನುವಾರ, 29 ಸೆಪ್ಟಂಬರ್ 2024 (17:00 IST)
Photo Courtesy X
ಚೆನ್ನೈ: ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಅವರು ಉಪ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್‌ಎನ್‌ ರವಿ ಅವರು ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟಾಲಿನ್‌ ಸೇರಿದಂತೆ ನಿಯೋಜಿತ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ತಂಡದಲ್ಲಿ ಸಂಪುಟ ಪುನಾರಚನೆಯ ಭಾಗವಾಗಿ ಇಂದು ಮಧ್ಯಾಹ್ನ ಡಿಎಂಕೆ ಸರ್ಕಾರದಲ್ಲಿ ಮೂವರು ತಮಿಳುನಾಡಿನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರಿಂ ಕೋರ್ಟ್ ಜಾಮೀನು ನೀಡುವ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 15 ತಿಂಗಳು ಜೈಲು ವಾಸ ಅನುಭವಿಸಿದ್ದ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಅವರು ಇಂದು ಸಚಿವರಾಗಿ ಪುನಃ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಇತರ ಮೂವರು ಶಾಸಕರೆಂದರೆ ಗೋವಿ ಚೆಜಿಯಾನ್, ಎಸ್ ಎಂ ನಾಸರ್ ಮತ್ತು ಆರ್ ರಾಜೇಂದ್ರನ್.  ಬಾಲಾಜಿ ವಿದ್ಯುತ್, ಅಬಕಾರಿ ಮತ್ತು ನಿಷೇಧ ಸಚಿವರಾಗಿ ಮರಳಿದ್ದಾರೆ. ಚೆಝಿಯಾನ್ ಅವರು ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ, ನಾಸರ್ ಹೊಸ ಅಲ್ಪಸಂಖ್ಯಾತರ ಸಚಿವರಾಗಲಿದ್ದಾರೆ ಮತ್ತು ರಾಜೇಂದ್ರನ್ ಅವರಿಗೆ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ.

ಇಂದು ಮುಂಜಾನೆ, ಉದಯನಿಧಿ ಸ್ಟಾಲಿನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ 'ಉಪಮುಖ್ಯಮಂತ್ರಿ' ನನಗೆ ಸ್ಥಾನವಲ್ಲ ಆದರೆ ಜವಾಬ್ದಾರಿ ಎಂದು ಹೇಳಿದ್ದಾರೆ. ಅವರು ತಮ್ಮ ತಾತ ಎಂ ಕರುಣಾನಿಧಿ ಮತ್ತು ಸಾಮಾಜಿಕ ಕಾರ್ಯಕರ್ತ ಪೆರಿಯಾರ್ ಅವರ ಸ್ಮಾರಕಗಳಿಗೆ ಭೇಟಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ