ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಟ್ ಕಾಯಿನ್ ಹಗರಣ ಮತ್ತೆ ಸದ್ದು ಮಾಡುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಿದ ಬಳಿಕ ಮರು ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಇದರ ನಡುವೆ ತನ್ನ ಮೇಲಿನ ಕೇಸ್ ವಜಾಗೊಳಿಸುವಂತೆ ಕೋರಿ ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎಂದು ಹೇಳಲಾಗುತ್ತಿರುವ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕೀ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಮರು ತನಿಖೆಯದ್ದೆ ಸದ್ದು ಪ್ರಾರಂಭವಾಗಿದೆ. ಸರ್ಕಾರ ಕೂಡ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ SIT ತಂಡ ರಚಿಸಿದೆ. ಆದರೆ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ.
ಇಸ್ರೇಲ್ ದೇಶದ ಸಹಾಯ ಪಡೆಯಲು ಹಂತ-ಹಂತ ಪ್ರಕ್ರಿಯೆ ಪಾಲಿಸಬೇಕಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ವಾಲೇಟ್ಗಳನ್ನ ಫ್ರೀಜ್ ಮಾಡುವಷ್ಟು ಟೆಕ್ನಾಲಜಿ ನಮ್ಮಲ್ಲಿ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ರಾಜ್ಯ ಸಿಐಡಿ SIT ತಂಡ ಇದಕ್ಕಾಗಿ ಇಸ್ರೇಲ್ ಬಳಿ ಸಹಾಯ ಕೇಳುವ ಸಾಧ್ಯತೆ ಇದೆ.