ಚುನಾವಣೆ ಟೈಂನಲ್ಲಿ ಅನಂತ್ ಕುಮಾರ್ ಹೆಗ್ಡೆಗೆ ಇದು ಬೇಕಿತ್ತಾ? ಬಿಜೆಪಿ ಹೈಕಮಾಂಡ್ ಗರಂ

Krishnaveni K

ಸೋಮವಾರ, 11 ಮಾರ್ಚ್ 2024 (12:33 IST)
ಬೆಂಗಳೂರು: ಚುನಾವಣೆ ಹತ್ತಿರ ಬಂದಾಗ ದಿನಕ್ಕೊಂದು ಉಗ್ರ ಹೇಳಿಕೆ ನೀಡುತ್ತಿರುವ ಉತ್ತರ ಕರ್ನಾಟಕ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಈಗ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಪ್ಲಸ್ ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾಯಿಸಬಹುದು ಎಂದು ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ಯಾವ ರೀತಿ ಬಿಜೆಪಿ ಸಂವಿಧಾನ ಬದಲಾಯಿಸಲಿದೆ ಎಂದು ಹೇಳಲಿ ಎಂದಿದ್ದರು. ಅಲ್ಲದೆ, ಅನಂತ್ ಕುಮಾರ್ ಹೇಳಿಕೆ ಬಿಜೆಪಿಗೇ ಮುಜುಗರ ತಂದಿತ್ತು.

ಇದರ ಬೆನ್ನಲ್ಲೇ ಈಗ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಗರಂ ಆಗಿದ್ದು, ವಿವರಣೆ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ. ಅನಂತ್ ಕುಮಾರ್ ಹೆಗ್ಡೆ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಂತೇ ಬಿಜೆಪಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ಇದು ಅವರ ವೈಯಕ್ತಿಕ ಹೇಳಿಕೆಯಷ್ಟೇ ಹೊರತು, ಪಕ್ಷದ ಹೇಳಿಕೆಯಲ್ಲ ಎಂದಿತ್ತು.

ಲೋಕಸಭೆ ಚುನಾವಣೆಯ ಸೂಕ್ಷ್ಮ ಸಮಯದಲ್ಲಿ ಅನಂತ್ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ತರಬಹುದು. ಹೀಗಾಗಿ ಬಿಜೆಪಿ ಹೈಕಮಾಂಡ್ ಇದರ ಬಗ್ಗೆ ಸ್ಪಷ್ಟನೆ ನೀಡಲು ಸೂಚಿಸಿದೆ. ಅನಂತ್ ಕುಮಾರ್ ಹೆಗ್ಡೆ ಇಂತಹದ್ದೊಂದು ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿ ಚುನಾವಣೆ ವೇಳೆಯೂ ಇದೇ ಅಸ್ತ್ರ ಬಳಸಿ ವಿವಾದಕ್ಕೆ ಕಾರಣರಾಗಿದ್ದರು. ಇಂತಹ ಹೇಳಿಕೆಗಳನ್ನು ನೀಡುವುದು ಸುಲಭ. ಆದರೆ ಅದರಿಂದ ಪಕ್ಷಕ್ಕೆ ಆಗುವ ಹಾನಿ ದೊಡ್ಡದು. ಮೊದಲೇ ಚುನಾವಣೆ ಬಂದಾಗ ಅನಂತ್ ಕುಮಾರ್ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ ಎಂಬ ಅಪವಾದವಿದೆ. ಪಕ್ಷವನ್ನು ಗೆಲ್ಲಿಸಲು ಇಂತಹ ಹೇಳಿಕೆಗಳೊಂದೇ ಸಾಕಾಗಾದು. ಅನಂತ್ ಈ ಹೇಳಿಕೆ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ. ಹೀಗಾಗಿ ಈ ಬಾರಿ ಸ್ವತಃ ಬಿಜೆಪಿ ಹೈಕಮಾಂಡ್ ಅವರ ಹೇಳಿಕೆ ವಿರುದ್ಧ ಗರಂ ಆಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ